ಹೊನ್ನಾವರ: ಸರ್ಕಾರ ಹಲವು ಯೋಜನೆಗಳನ್ನು ತರುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಲವು ಬಗೆಯ ಸೌಲಭ್ಯ ಹೊಂದಿರುವ ಈ ಮೇಳ ಆಯೋಜಿಸುವ ಮೂಲಕ ಸರ್ಕಾರ ಜನತೆಗೆ ಅನುಕೂಲ ಕಲ್ಪಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
75ನೇ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಆಸ್ಪತ್ರೆಯಲ್ಲಿ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಸೌಲಭ್ಯ ಒಳಗೊಂಡಿರುವ ತಾಲೂಕ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದೆ. ಆಶಾ ಕಾರ್ಯಕತೆಯರು ನಮ್ಮ ದೇಶದ ಆರೋಗ್ಯದ ಸೈನಿಕರಿದ್ದಂತೆ. ಕೋವಿಡ್ ಸಂದರ್ಭದಲ್ಲಿ ಅವರ ಸೇವೆಯನ್ನು ಮರೆಯುವಂತಿಲ್ಲ. ತಳಮಟ್ಟದಲ್ಲಿ ಆರೋಗ್ಯ ಸೇವೆ ಮುಟ್ಟಿಸುವಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ವೈದ್ಯರಿಗೆ ಸಹಕಾರ ನೀಡಿ ಉತ್ತಮ ಸೇವೆ ನೀಡುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಗಳು ವೈದ್ಯರಿಗೆ ಸಹಕಾರ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ, ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿರೂಪಾಕ್ಷ ಪಾಟೀಲ್, ಜಿಲ್ಲಾ ಆರೋಗ್ಯ ಕಾರ್ಯಕ್ರಮಾಧಿಕಾರಿ ಶಂಕರ ರಾವ್, ಪಟ್ಟಣ ಪಂಚಾಯತ ಉಪಾಧ್ಯಕ್ಷೆ ನಿಶಾ ಶೇಟ್ ಉಪಸ್ಥಿತರಿದ್ದರು.
ತಾಲೂಕ ಆರೊಗ್ಯಧಿಕಾರಿ ಡಾ.ಉಷಾ ಹಾಸ್ಯಗಾರ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ವಂದಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಆನಂದ ಶೇಟ್ ಮತ್ತು ಆಪ್ತಸಮಾಲೋಚಕ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಆರೋಗ್ಯ ಮೇಳದಲ್ಲಿ ಆರೋಗ್ಯ ಸಂಬಂಧಿತ ಸೇವೆಗಳ ಮಾಹಿತಿ ನೀಡುವ ವಿವಿಧ ಬಗೆಯ 15 ಸ್ಟಾಲ್‍ಗಳನ್ನು ನಿರ್ಮಿಸುವ ಮೂಲಕ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರೋಗ್ಯ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: ತಾಲೂಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ಮೇಳದಲ್ಲಿ ದಾಖಲೆಯ 800ಕ್ಕೂ ಹೆಚ್ಚಿನ ಜನ ನೋಂದಣಿ ಮಾಡಿಸಿಕೊಂಡರು. ಡಿಜಿಟಲ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ನೇತ್ರ ಚಿಕಿತ್ಸೆಯಲ್ಲಿ ಆಯುಷ್ಮಾನ್ ವಿಭಾಗ, ಜನರಲ್ ಮೆಡಿಸಿನ್ ವಿಭಾಗ, ಮೂಳೆ ಮತ್ತು ಎಲಬು ವಿಭಾಗ, ಮಾನಸಿಕ ವಿಭಾಗ ಸೇರಿದಂತೆ ವಿವಿಧ ವಿಭಾಗಳಲ್ಲಿ ಜನರು ಚಿಕಿತ್ಸೆ ಪಡೆದುಕೊಂಡರು. ನೂರೈತ್ತಕ್ಕೂ ಹೆಚ್ಚು ಜನ ವಿವಿಧ ರೀತಿಯ ರಕ್ತ ಪರೀಕ್ಷೆಗೆ ಒಳಗಾದರು. 34 ಜನರಿಗೆ ಎಕ್ಸ್- ರೇ ಮಾಡುವ ಮೂಲಕ ಸೇವೆ ನೀಡಿದರು. ಮಧುಮೇಹ, ಬಿಪಿ, ಇ.ಸಿ.ಜಿ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯ ವೈದ್ಯ ಪರೀಕ್ಷೆಗಳು ಸಂಪೂರ್ಣವಾಗಿ ಉಚಿತವಾಗಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಂಡರು.
ಅಸಮಧಾನ ವ್ಯಕ್ತಪಡಿಸಿದ ಶಾಸಕ: ಕೋವಿಡ್ ಸಮಯದಲ್ಲಿ ಉತ್ತಮ ಸೇವೆ ನೀಡಿದ್ದಾರೆ ಎಂದು ಆಶಾ ಕಾರ್ಯಕರ್ತೆಯರನ್ನು ಹೊಗಳುವ ಭರಾಟೆಯಲ್ಲಿ,ಅಂಗನವಾಡಿ ಕಾರ್ಯಕರ್ತೆಯರು ಈಗ ಯಾರ ಮಾತನ್ನು ಕೇಳುತ್ತಿಲ್ಲ. ಅವರ ಇಲಾಖೆ ಸರ್ಕಾರದ ಹಸ್ತಕ್ಷೇಪ ನಡೆಯುವುದಿಲ್ಲ. ಹಲವು ಸೌಲಭ್ಯ ಈಡೇರಿಸಿದ ಬಳಿಕ ಈ ಸ್ಥಿತಿ ಎದುರಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕಾಲಹರಣ ಮಾಡಿ ಇಲ್ಲ ಸಲ್ಲದ ಕಾರಣ ನೀಡುತ್ತಾರೆ ಎಂದರು. ಸಭೆ ಮುಗಿಯುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು ಇರುವ ಸ್ಟಾಲ್‍ಗೆ ಭೇಟಿ ನೀಡಿ ಸಿಹಿ ತಿಂಡಿ ಸೇವಿಸಿ, ರಾಗಿ ನೀರು ಕುಡಿದರು.