ಶಿರಸಿ: ಪ್ರತಿಷ್ಟಿತ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಹಿರಿಯ ಸಹಕಾರಿ ಶಂಭುಲಿಂಗ ಹೆಗಡೆ ನಿಡಗೋಡು ಅವರಿಗೆ ಮೇ 3 ರಂದು ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ವಿ.ಭಟ್ ತಟ್ಟಿಕೈ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು,1980ರಲ್ಲಿ ಸಹಕಾರ ಸೇವೆ ಆರಂಭಿಸಿದ ಶಂಭುಲಿಂಗ ಹೆಗಡೆ ನಿಡಗೋಡು ಇವರಿಗೆ ಕರ್ನಾಟಕ ರಾಜ್ಯ ಸರಕಾರವು ಪ್ರತಿಷ್ಟಿತ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಸಹಕಾರಿ ಕ್ಷೇತ್ರದಲ್ಲಿ ನಿಷ್ಠಾವಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಶಿಸ್ತು, ಪ್ರಾಮಾಣಿಕತೆಯಿಂದಲೇ ಹೆಸರುವಾಸಿಯಾಗಿರುವ ಶಂಭುಲಿಂಗ ಹೆಗಡೆಯವರು ಹುಳಗೋಳ ಸೊಸೈಟಿ ಮೂಲಕ 1980ರ ದಶಕದಲ್ಲೇ ಸಹಕಾರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆ ಬಳಿಕ ತಾರಗೋಡ ಹಾಲು ಸೊಸೈಟಿ, ಧಾರವಾಡ ಹಾಲು ಒಕ್ಕೂಟ, ಕೆಎಂಎಫ್, ಶಿರಸಿಯ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ, ರೈತರ ಜೀವನಾಡಿಯಾಗಿ ವೈವಿಧ್ಯಮಯ ಕಾರ್ಯಚಟುವಟಿಕೆ, ಮಾರುಕಟ್ಟೆ ವ್ಯವಸ್ಥೆ ನಡೆಸಿಕೊಂಡು ಬಂದಿರುವ ಅವರು, ಕದಂಬ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಮತ್ತು ಎರಡನೇ ಅವಧಿಗೆ, ಅಡಕೆ ಮಾರಾಟ ವ್ಯವಹಾರದ ಬೃಹತ್ ಸಂಸ್ಥೆಯಾದ ಕ್ಯಾಂಪೋ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
1972ರಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿರುವ ಶಂಭುಲಿಂಗ ಹೆಗಡೆ, 1978ರ ತುರ್ತು ಪರಿಸ್ಥಿತಿಯಲ್ಲೂ ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸಿದ್ದರು. ಭಾರತೀಯ ಜನತಾ ಪಾರ್ಟಿಯಲ್ಲಿಯೂ ಹಲವು ಹಂತದ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದರು.
ಅವರನ್ನು ಸನ್ಮಾನಿಸುವ ಸಲುವಾಗಿ ಕದಂಬ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಶ್ರೀಪಾದ ಹೆಗಡೆ ದೊಡ್ಡಳ್ಳಿ, ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ ನಾಯಕ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯ್ಸದ್, ಹುಳಗೋಳ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಾಂತಾರಾಮ ಹೆಗಡೆ ಅಂಬಳಿಕೆ ಮತ್ತು ತಾರಗೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ತಾರಗೋಡ ಇವರನ್ನೊಳಗೊಂಡ ಅಭಿನಂದನಾ ಸಮಿತಿ ರಚಿಸಲಾಗಿದೆ.
ಮೇ 3 ರ ಮಧ್ಯಾಹ್ನ 3.30ಕ್ಕೆ ಕದಂಬ ಸಂಸ್ಥೆ ಆವರಣದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸನ್ಮಾನ ನೆರವೇರಿಸಲಿದ್ದಾರೆ. ಸಹಕಾರ ಭಾರತೀ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ ಕೊಡ್ಗಿ, ಸಹಕಾರ ಭಾರತೀ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ, ಭಾಸ್ಕರ ಹೆಗಡೆ ಕಾಗೇರಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕದಂಬ ವಿವಿದೊದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಶ್ರೀಪಾದ ಹೆಗಡೆ ದೊಡ್ನಳ್ಳಿ, ಕದಂಬ ಮಾರ್ಕೆಟಿಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಭಟ್ ಕೋಟೆಮನೆ ಸೇರಿದಂತೆ ಇತರರಿದ್ದರು.