ನವದೆಹಲಿ: ಬಾಂಗ್ಲಾದೇಶ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗುರುವಾರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದರು. ಅಲ್ಲಿನ ವಿದೇಶಾಂಗ ಸಚಿವ ಡಾ. ಎ ಕೆ ಅಬ್ದುಲ್ ಮೊಮೆನ್ ಅವರನ್ನೂ ಢಾಕಾದಲ್ಲಿ ಭೇಟಿ ಮಾಡಿದರು.
“ಪ್ರಧಾನಿ ಶೇಖ್ ಹಸೀನಾ ಅವರ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಶುಭಾಶಯಗಳನ್ನು ತಲುಪಿಸಿದ್ದೇನೆ. ಇಬ್ಬರು ನಾಯಕರ ಮಾರ್ಗದರ್ಶನದಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಬಲಿಷ್ಠವಾಗಿ ಸಾಗುತ್ತಿವೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕದ ಪ್ರಭಾವದಿಂದ ಚೇತರಿಸಿಕೊಂಡ ನಂತರ ಉಭಯ ದೇಶಗಳ ವ್ಯಾಪಾರ, ಹೂಡಿಕೆ, ಪ್ರಯಾಣ ಸೇವೆಗಳು, ಸಂಪರ್ಕ ಮತ್ತು ದ್ವಿಪಕ್ಷೀಯ ಯೋಜನೆಗಳಿಗೆ ಸಾಲಗಳ ವಿತರಣೆಯು ಹೊಸ ಉತ್ತುಂಗ ತಲುಪಿದೆ ಎಂದು ಡಾ. ಜೈಶಂಕರ್ ತೃಪ್ತಿ ವ್ಯಕ್ತಪಡಿಸಿದರು.
ವಿದ್ಯುತ್ ಮತ್ತು ಇಂಧನ ವಲಯ ಮತ್ತು ಇತರ ಸಂಪರ್ಕ ಸೇರಿದಂತೆ ಯೋಜನೆಗಳು ಶೀಘ್ರ ಕಾರ್ಯಾರಂಭ ಮಾಡಲಿವೆ ಎಂದ ಅವರು, ಬಾಂಗ್ಲಾದೇಶ ಭೂತಾನ್ ಭಾರತ ಮತ್ತು ನೇಪಾಳ (BBIN) ಚೌಕಟ್ಟಿನ ಅಡಿಯಲ್ಲಿ ಸಂಪರ್ಕ ಮತ್ತು ಇತರ ಪ್ರದೇಶಗಳಲ್ಲಿ ಬಲವಾದ ಉಪ-ಪ್ರಾದೇಶಿಕ ಸಹಕಾರಕ್ಕಾಗಿ ಆಶಿಸಿದರು.
ಡಾ. ಎಸ್. ಜೈಶಂಕರ್ ಅವರ ಬಾಂಗ್ಲಾದೇಶ ಭೇಟಿಯು ಕಳೆದ ವರ್ಷ ಮಾರ್ಚ್‌ನಿಂದ ಬಾಂಗ್ಲಾದೇಶಕ್ಕೆ ಭಾರತೀಯ ನಾಯಕತ್ವದ ಅತ್ಯುನ್ನತ ಮಟ್ಟದ ನಾಲ್ಕನೇ ಭೇಟಿಯಾಗಿದೆ.