ಕಾರವಾರ: ಭಾರತದ ಪರಮಾಣು ನಿಯಂತ್ರಕವು ಅನುಮತಿ ನೀಡಿದ ಒಂದೇ ತಿಂಗಳ ಒಳಗೆ ತಾಲೂಕಿನ ಕೈಗಾದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆಗೆ ಏ.28ರಂದು ತರಾತುರಿಯಲ್ಲಿ ಭೂಮಿಪೂಜೆ ನೆರವೇರಿಸಲಾಗಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೈಗಾದಲ್ಲಿ ಕೇಂದ್ರದಲ್ಲಿ ತಲಾ 700 ಮೆಗಾವ್ಯಾಟ್ ಸಾಮಥ್ರ್ಯದ ಎರಡು ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಕಾಮಗಾರಿ ಆರಂಭಿಸಲು ಮಾರ್ಚ್ 31ರಂದು ಪರಮಾಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್‍ಬಿ) ಅನುಮತಿ ನೀಡಿತ್ತು. ಈ ಬಗ್ಗೆ ಇತ್ತೀಚಿಗೆ ಭಾರತೀಯ ಅಣುಶಕ್ತಿ ವಿದ್ಯುತ್ ನಿಗಮ (ಎನ್‍ಪಿಸಿಐಎಲ್) ನೀಡಿದ್ದ ಮಾಧ್ಯಮ ಪ್ರಕಟಣೆಯಲ್ಲಿ, ಘಟಕಗಳ ನಿರ್ಮಾಣ ಕಾರ್ಯ ಮುಂದಿನ ವರ್ಷ ಆರಂಭವಾಗಲಿದೆ ಎಂದು ತಿಳಿಸಿತ್ತು. ಆದರೆ, ಜನಪ್ರತಿನಿಧಿಗಳಿಗಾಗಲಿ, ಸ್ಥಳೀಯ ಮುಖಂಡರುಗಳಿಗಾಗಲಿ, ಮಾಧ್ಯಮಗಳಿಗೂ ಮಾಹಿತಿ ನೀಡದೇ ಗುರುವಾರ ಕೈಗಾದಲ್ಲಿ ಈ ಎರಡೂ ಘಟಕಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.
ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಲು 2017ರ ಜೂನ್‍ನಲ್ಲಿ 1.05 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ತಲಾ 700 ಮೆಗಾವ್ಯಾಟ್‍ನ 10 ಪರಮಾಣು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ಪೈಕಿ ಕೈಗಾದ ಎರಡು ಘಟಕಗಳು ಸೇರಿವೆ. ಈ ಘಟಕಗಳ ನಿರ್ಮಾಣ ಕಾಮಗಾರಿಯನ್ನ ಇನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಬೇಕೆಂಬ ಗುರಿ ಎನ್‍ಪಿಸಿಐಎಲ್‍ನದ್ದಾಗಿದೆ.
ಆತ್ಮ ನಿರ್ಭರ ಭಾರತ: ಕೈಗಾ 5 ಮತ್ತು 6ನೇ ಘಟಕಗಳು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ ವಿಶ್ವದ ಅತ್ಯುತ್ತಮವಾದವುಗಳಿಗೆ ಹೋಲಿಸಬಹುದಾದ ಆತ್ಮ ನಿರ್ಭರ ಭಾರತದ ಒಂದು ಸಂಕೇತವಾಗಿದೆ ಎಂದು ಗುರುವಾರ ಕೈಗಾದ ಅಧಿಕಾರಿಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾದಲ್ಲಿ ಪ್ರಸ್ತುತ 880 ಮೆಗಾವ್ಯಾಟ್ ಸಾಮಥ್ರ್ಯದ (ತಲಾ 220) ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ. 962 ದಿನಗಳ ಸುದೀರ್ಘ ನಿರಂತರ ಕಾರ್ಯಾಚರಣೆ ಮಾಡುವ ಮೂಲಕ 2018ರಲ್ಲಿ ಇಲ್ಲಿನ ಮೊದಲ ಘಟಕ ವಿಶ್ವ ದಾಖಲೆ ನಿರ್ಮಿಸಿತ್ತು. ಕೈಗಾ 5 ಮತ್ತು 6ರ ಯೋಜನೆ ಪೂರ್ಣಗೊಂಡ ನಂತರ ಕೈಗಾದಲ್ಲಿ ಅಣುವಿದ್ಯುತ್ ಸಾಮಥ್ರ್ಯವು 2280 ಮೆಗಾವ್ಯಾಟ್‍ಗೆ ಏರುತ್ತದೆ ಎಂದು ತಿಳಿಸಿದೆ.
ಮತ್ತೆ ಹೋರಾಟ ಸಾಧ್ಯತೆ; ಈ ಹಿಂದಿನಿಂದಲೂ ಕೈಗಾದಲ್ಲಿ ಅಣುವಿದ್ಯುತ್ ಘಟಕಗಳ ನಿರ್ಮಾಣ ಹಾಗೂ ಕಾರ್ಯಾಚರಣೆಗೆ ಸ್ಥಳೀಯರ ವಿರೋಧವಿದೆ. ಅಣುವಿದ್ಯುತ್ ಘಟಕಗಳು ಭವಿಷ್ಯದಲ್ಲಿ ಸ್ಥಳೀಯರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿನವರ ವಾದವಾಗಿತ್ತು. ಇಷ್ಟೇ ಅಲ್ಲದೇ, 5 ಮತ್ತು 6ನೇ ಘಟಕ ನಿರ್ಮಾಣ ವಿರೋಧಿಸಿ ಬೃಹತ್ ಪ್ರತಿಭಟನೆ, ಉಡುಪಿಯ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು. ಆದರೆ ಎಲ್ಲವನ್ನೂ ಕಡೆಗಣಿಸಿ ಈಗ ಕೈಗಾದ ಅಧಿಕಾರಿಗಳು ಏಕಾಧಿಪತ್ಯ ಸಾಧಿಸಲು ಹೊರಟಿರುವುದು ಮತ್ತೆ ಸ್ಥಳೀಯರಿಗೆ ಹೋರಾಟದ ಹಾದಿ ಹಿಡಿಯಲು ಪ್ರೇರಣೆ ನೀಡಿದಂತಾಗಿದೆ.