ಕಾರವಾರ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.9 ಅಳ್ವೇವಾಡ, ವಾರ್ಡ್ ನಂ.17 ನದಿವಾಡ ಹಾಗೂ ವಾರ್ಡ್ ನಂ.24ರ ನಾಗನಾಥವಾಡಕ್ಕೆ ಬುಧವಾರ ಬೆಳಿಗ್ಗೆ ಶಾಸಕಿ ರೂಪಾಲಿ ಎಸ್.ನಾಯ್ಕ ಭೇಟಿ ನೀಡಿದರು.
ಬಳಿಕ ಅವರು ಮಾತನಾಡಿ, ಈ ವಾರ್ಡ್‍ಗಳಲ್ಲಿ ಅವಶ್ಯಕವಾಗಿರುವ ರಸ್ತೆ, ತಡೆಗೋಡೆ, ಜಟ್ಟಿ ಹಾಗೂ ಅವಶ್ಯಕ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳೀಯರು ಮಾಡಿದ ಮನವಿ ಹಾಗೂ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.
ಅಳ್ವೇವಾಡದಲ್ಲಿ ವ್ಯವಸ್ಥಿತವಾಗಿ ತಡೆಗೋಡೆ ಮತ್ತು ಇಲ್ಲಿಯ ಜನರಿಗೆ ಅನುಕೂಲವಾಗುವ ರಸ್ತೆ ಹಾಗೂ ಅಗತ್ಯವಾಗಿರುವ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗದಂತೆ ವ್ಯವಸ್ಥಿತವಾಗಿ ಕ್ರಮಕೈಗೊಳ್ಳಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.
ಸ್ಥಳೀಯ ಮೀನುಗಾರರು ಸರ್ಕಾರದ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಸೌಲಭ್ಯ ತಲುಪಿಸುವುದು ಅವಶ್ಯಕವಾಗಿದೆ. ಕಿಸಾನ್ ಕಾರ್ಡ್‍ದಿಂದ ಬರುವ ಸೌಲಭ್ಯಗಳು ಅವರಿಗೂ ತಲುಪುವಂತಾಗಬೇಕು. ಎಲ್ಲ ಮೀನುಗಾರರನ್ನು ಕರೆದು ಸಭೆ ನಡೆಸಲಾಗುವುದು ಎಂದು ಮೀನುಗಾರ ಮುಖಂಡರಿಗೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ಸದಸ್ಯರು, ಸಾರ್ವಜನಿಕರು ಇದ್ದರು.