ಕುಮಟಾ:ಇಂದಿನ ದಿನದಲ್ಲಿ ಮಹಿಳೆಯರು ಸ್ವಾವಲಂಬಿಗಳಾದಾಗ ಮಾತ್ರ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ತರಬೇತಿಯ ಮೌಲ್ಯಮಾಪಕಿ ರಶ್ಮಿ ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯು 10 ದಿನಗಳ ಕಾಲ ಹಮ್ಮಿಕೊಂಡಿದ್ದ ಪೇಪರ್ ಕವರ್, ಎನ್ವೆಲಪ್ ಮತ್ತು ಫೈಲ್ ತಯಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಇನ್ನೋರ್ವ ಮೌಲ್ಯಮಾಪಕಿ ಶ್ರೇಯಾ ಮಾತನಾಡಿ, ಒಬ್ಬ ವ್ಯಕ್ಯಿಯು ತನ್ನ ಜೀವನದಲ್ಲಿ ಉದ್ಯಮಶೀಲ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸ್ವ- ಉದ್ಯೋಗದಲ್ಲಿ ಅಭಿವೃದ್ಧಿಯಾಗಲು ಸಾಧ್ಯವೆಂದು ತಿಳಿಸಿದರು. ತರಬೇತಿ ಸಂಸ್ಥೆಯ ನಿರ್ದೇಶಕ ರವಿ ಜಿ.ಕೆ, ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ನೀಡಬೇಕು ಮತ್ತು ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತಿಸುವಿಕೆ ಹಾಗೂ ವಂದನಾರ್ಪಣೆಗಳನ್ನು ಶಿಬಿರಾರ್ಥಿಗಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕ, ಉಪನ್ಯಾಸಕಿ ಮಮತಾ ನಾಯ್ಕ, ಸಂಪನ್ಮೂಲ ವ್ಯಕ್ತಿ ಸುಮಿತ್ರಾ ಇದ್ದರು.