ಯಲ್ಲಾಪುರ:ತಾಲೂಕಿನ ಹಳಿಯಾಳ ರಸ್ತೆಯ ಕಣ್ಣಿಗೇರಿ ಬಳಿ ಕಾಡಾನೆ ಕಾಣಿಸಿಕೊಂಡು ಆತಂಕ ಮೂಡಿಸಿತು.
ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ಬಳಿ ಆನೆ ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಆತಂಕಪಡುವಂತಾಯಿತು. ಯಲ್ಲಾಪುರದಿಂದ ಹಳಿಯಾಳಕ್ಕೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಆನೆ ಎದುರಾಯಿತು. ಆನೆ ರಸ್ತೆ ದಾಟಿ ಕಾಡಿಗೆ ಹೋಗುವವರೆಗೂ ಪ್ರಯಾಣಿಕರು, ವಾಹನ ಸವಾರರು ಕಾಯಬೇಕಾಯಿತು.
ಆನೆ ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಬೈಕ್ ಸವಾರನೊಬ್ಬ ಬೈಕ್ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಬುದ್ಧಿ ಹೇಳಿ ಅವನನ್ನು ಮರಳಿ ಕಳುಹಿಸಿದರು. 5-10 ನಿಮಿಷಗಳ ಕಾಲ ರಸ್ತೆ ಬಳಿ ನಿಂತ ಆನೆ, ತನ್ನಷ್ಟಕ್ಕೆ ತಾನೇ ಕಾಡಿನೊಳಕ್ಕೆ ಹೋಗಿದೆ. ನಂತರ ವಾಹನ ಸವಾರರು ನಿರಾತಂಕವಾಗಿ ಪ್ರಯಾಣ ಮುಂದುವರಿಸಿದರು.