ಕಾರವಾರ: ಬಿಣಗಾದ ಶ್ರೀ ಸೋಮನಾಥ ಹೈಸ್ಕೂಲ್ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಇಂಟಕ್ ಪದಾಧಿಕಾರಿಗಳ ಸಭೆಯಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಿ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವಂತೆ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿಯನ್ನು ಅರ್ಪಿಸಿ ಒತ್ತಾಯಿಸಲು ತೀರ್ಮಾನಿಸಲಾಯಿತು.
ಜಿಲ್ಲೆಯ ಕೆಲವು ತಾಲೂಕಿನ ಕಾರ್ಮಿಕ ಕಚೇರಿಗಳಲ್ಲಿ ಕಾರ್ಮಿಕರ ಅಹವಾಲು ಸ್ವೀಕರಿಸಲು ಅಧಿಕಾರಿಗಳೇ ಇಲ್ಲದಿರುವುದರ ಬಗ್ಗೆ ಕೂಡ ಕಾರ್ಮಿಕ ಸಚಿವರಿಗೆ ಮನವಿಯನ್ನು ಅರ್ಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಬೇಕೆಂದು ಸಭೆಯಲ್ಲಿ ತಿರ್ಮಾನಿಸಿ ಮೇ 1 ರ ಕಾರ್ಮಿಕ ದಿನಾಚರಣೆಯನ್ನು ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆಸುವ ಬಗ್ಗೆ ಹಾಗೂ ಜಿಲ್ಲೆಯ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಇಂಟಕ್ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತ, ರಾಜ್ಯ ಇಂಟಕ್ ಕಾರ್ಯದರ್ಶಿ ಸಂತೋಷ ಗುರುಮಠ, ಉಪಾಧ್ಯಕ್ಷ ಉಮಾಕಾಂತ ಹರಿಕಾಂತ, ತಾಲೂಕ ಅಧ್ಯಕ್ಷ ಶ್ರೀಧರ ಬಿಣಗೆ, ಕಾರ್ಯದರ್ಶಿ ದಿಂಗಾ ಗೌಡ, ಆಶೋಕ ಗುನಗಿ ಮುಂತಾದವರು ಉಪಸ್ಥಿತರಿದ್ದರು.