ಅಂಕೋಲಾ: ಅಂಕೋಲಾ ನಾಡವರ ಸಂಘದ ಪ್ರಸ್ತುತ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಿ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಉಮಾಶಂಕರ ಎಸ್. ಆರ್. ಆದೇಶ ಹೊರಡಿಸಿದ್ದಾರೆ.ಸಂಘದ ಚುನಾವಣೆ ಗೆಲ್ಲುವ ಉದ್ದೇಶದಿಂದ ಚುನಾವಣೆ ದಿನಾಂಕ ನಿಗದಿಪಡಿಸಿ ನಂತರ ಕಾರ್ಯಾಕಾರಿ ಮಂಡಳಿ ಸಭೆ ನಡೆಸಿ ಹೊಸ ಸದಸ್ಯರನ್ನು ನೊಂದಣಿ ಮಾಡಿಕೊಂಡು ಚುನಾವಣೆ ನಡೆಸಿದ ಆಡಳಿತ ಮಂಡಳಿ ಕ್ರಮಬದ್ಧವಿಲ್ಲ ಎಂದು ಈ ಕ್ರಮ ಕೈಗೊಳ್ಳಲಾಗಿದೆ.
ಸಂಘದ ಆಡಳಿತ ಮಂಡಳಿಯ ಅಧಿಕಾರದ ಅವಧಿಯು 23/12/2020ರಂದು ಪೂರ್ಣ ಗೊಂಡಿದೆ. ಅವಧಿ ಮುಗಿದ ಆಡಳಿತ ಮಂಡಳಿಯು ಕೇವಲ ಉಸ್ತುವಾರಿ ಆಡಳಿತ ಮಂಡಳಿಯಾಗಿತ್ತು. ಅಧಿಕಾರ ಮುಗಿದ ಆಡಳಿತ ಮಂಡಳಿಗೆ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ಆದರೆ ಆಡಳಿತ ಮಂಡಳಿಯ ಅವಧಿಯು 23/12/2020ಕ್ಕೆ ಮುಗಿದಿದ್ದರೂ 3/1/2021ರಂದು ಸಭೆ ನಡೆಸಿ ಸಂಘದ ಕಾರ್ಯಾಕಾರಿ ಮಂಡಳಿಗೆ ಚುನಾವಣೆಯನ್ನು 28/2/2021ರಂದು ನಡೆಸಲು ತೀರ್ಮಾನಿಸಿ 24/1/2021ರಂದು ಮತ್ತೆ ಕಾರ್ಯಾಕಾರಿ ಸಮಿತಿಯ ಸಭೆ ನಡೆಸಿ 356 ಹೊಸ ಸದಸ್ಯರನ್ನು ನೊಂದಣಿ ಮಾಡಿಕೊಳ್ಳಲಾಗಿದೆ.
ಈ ಕುರಿತು ಸಂಘದ ಕೆಲವು ಹಿರಿಯಸದಸ್ಯರು ಇದು ಕಾನೂನು ಬಾಹಿರವೆಂದು ತಕರಾರು ಮಾಡಿ ಅಧ್ಯಕ್ಷರಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿದ್ದರೂ ಸಹಿತ ಈ ತಕರಾರರು ಅರ್ಜಿಯ ಕುರಿತು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಈ ಸದಸ್ಯರ ನೇಮಕ ಚುನಾವಣೆ ಗೆಲ್ಲುವ ಉದ್ದೇಶ ಎನ್ನುವುದು ಸ್ಪಷ್ಟವಾಗಿ ಕಂಡುಬರುವುದರಿAದ ಚುನಾವಣೆ ಪ್ರಕ್ರಿಯೆ ಪಾರದರ್ಶಕ ವಾಗಿಲ್ಲ ಎಂದು ಸಂಘದ ಪ್ರಸ್ತುತ ಆಡಳಿತ ಮಂಡಳಿಯನ್ನು ಉಮಾಶಂಕರ ವಜಾ ಗೊಳಿಸಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಆಡಳಿತಾಧಿಕಾರಿಯು 3 ತಿಂಗಳ ಅವಧಿಯ ಒಳಗೆ ಆಡಳಿತ ಮಂಡಳಿಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸಿ ಅಧಿಕಾರ ಹಸ್ತಾಂತರ ಮಾಡಲು ಸಹ ಆದೇಶಿಸಲಾಗಿದೆ.
ಈ ಕುರಿತು ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆ ಪಾರದರ್ಶಕವಾಗಿಲ್ಲ ಎನ್ನುವ ವಿಚಾರವನ್ನು ಸಂಘದ ಗಮನಕ್ಕೆ ತರುವುದಷ್ಟೇ ಅಲ್ಲದೆ ತಮ್ಮ ಮನವಿಯನ್ನು ಸರಕಾರಕ್ಕೂ ಅರ್ಜಿದಾರರು ಸಲ್ಲಿಸಿದ್ದರು. ನಾರಾಯಣ ಕೃಷ್ಣ ನಾಯಕ ಬೇಲೆಕೇರಿ ಬೀರಣ್ಣ ಎಸ್ ನಾಯಕ, ದಯಾನಂದ ನಾರಾಯಣ ನಾಯಕ ಲಕ್ಷ್ಮೀಶ್ವರ, ನಾರಾಯಣ ರಾಮಾ ನಾಯಕ ಹೊನ್ನೆಕೇರಿ, ಆನಂದು ನಾಗಪ್ಪ ಕವರಿ ತೊರ್ಕೆ ರವರು ಸರಕಾರದ ಗಮನಕ್ಕೆ ತಂದ ಸಂಘದ ಅಂದಿನ ಕೆಲವು ಹಿರಿಯ ಆಡಳಿತ ಮಂಡಳಿಯ ಸದಸ್ಯರುಗಳಾಗಿದ್ದಾರೆ.
ನ್ಯಾಯಾಲಯದಲ್ಲಿ ವಾದಿ ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿ ದಾಖಲೆಗಳನ್ನು ನೀಡಲು ಕಾಲಾವಕಾಶ ನೀಡಲಾಗಿತ್ತು. ಸುಮಾರು 8 ಬಾರಿ ವಿಚಾರಣೆ ನಡೆಸಿ ಒದಗಿಸಿದ ದಾಖಲೆಗಳನ್ನು ಮತ್ತು ಲಿಖಿತ ಹೇಳಿಕೆಯನ್ನು ಪರಿಶೀಲಿಸಿ ಆಡಳಿತ ಮಂಡಳಿಗೆ ನಡೆದ ಚುನಾವಣೆ ಪಾರದರ್ಶಕವಾಗಿಲ್ಲ ಎಂದು ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.