ಅಂಕೋಲಾ: ತಾಲೂಕಿನ ಬೊಬ್ರುವಾಡದಲ್ಲಿ ಕಳೆದ ೧೫ ದಿನಗಳಿಂದ ಮಂಗವೊಂದು ಸಾರ್ವಜನಿಕರಿಗೆ ತುಂಬಾ ತೊಂದರೆ ನೀಡಿ, ೧೦ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು, ಪ್ರಾಣ ಸಂಕಟದಿಂದಲೇ ಸ್ಥಳೀಯರು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹುಡಿದ್ದು, ಯಾವುದೇ ಪ್ರಯೋಜನವಾಗುತ್ತಿಲ್ಲ. ೧೫ ದಿನಗಳಿಂದ ಚಿಕ್ಕ ಮಕ್ಕಳು, ವೃದ್ಧರು ಸೇರಿದಂತೆ ಹಲವರ ಮೇಲೆ ಕೋತಿ ದಾಳಿ ನಡೆಸಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ.
ಮಂಗಳವಾರ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಏಕಾಏಕಿ ವೃದ್ಧೆಯೊಬ್ಬಳ ಮೇಲೆ ದಾಳಿ ನಡೆಸಿದ ಮಂಗ, ಆಕೆಯ ಕಾಲಿಗೆ ಕಚ್ಚಿ ಮತ್ತೆ ಮರವೇರಿ ಕುಳಿತಿದೆ. ವೃದ್ಧೆಯ ಕಾಲಿನಿಂದ ತೀವ್ರ ರಕ್ತಸ್ರಾವವಾಗಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳಿದ್ದರು ಸಹ ಅರವಳಿಕೆ ಮದ್ದು ನೀಡುವ ತಜ್ಞರಿಲ್ಲದೆ ಕಾರ್ಯಾಚರಣೆ ಫಲಕಾರಿಯಾಗದೆ ಹಾಗೆಯೇ ಉಳಿದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಾಚರಣೆ ನಡೆಸುತ್ತಿದ್ದ ಡೇರಿಂಗ್ ಟೀಮ್ ಮುಖ್ಯಸ್ಥ ಅಶೋಕ್ ನಾಯ್ಕ ಕೋತಿಯನ್ನು ಹಿಡಿಯಲು ಮುಂದಾದಾಗ ಅವರಿಗೂ ಕಚ್ಚಿ ಎಸ್ಕೇಪ್ ಆಗಿದೆ. ಅವರ ಕೈ-ಕಾಲಿಗೆ ಗಾಯವಾಗಿದ್ದರು ಸಹ ಛಲಬಿಡದೆ ಅವರು ಉರಗ ಪ್ರೇಮಿ ಮಹೇಶ್ ನಾಯ್ಕ, ಅರಣ್ಯ ಇಲಾಖೆ ಸಿಬ್ಬಂದಿ ಸಿ.ಆರ್.ನಾಯ್ಕ ಹಾಗೂ ಬಸವನಗೌಡ ಬಗಲಿ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ.
ಮಂಗನನ್ನು ಸೆರೆಹಿಡಿಯಲು ಅರವಳಿಕೆ ಮದ್ದನ್ನು ನೀಡಲು ಅರಣ್ಯ ಇಲಾಖೆಯಲ್ಲಿ ನುರಿತ ತಜ್ಞರೇ ಬರಬೇಕಾಗಿದ್ದು, ಸಲಕರಣೆಗಳು ಬೇರೆಡೆಯಿಂದ ತಂದು ಕಾರ್ಯಾಚರಣೆ ನಡೆಸುವಷ್ಟರಲ್ಲಿ ಮತ್ತಷ್ಟು ಜನರ ಪ್ರಾಣಕ್ಕೆ ಸಂಚಕಾರ ಕಾದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಅನಾಹುತವಾಗುವಷ್ಟರಲ್ಲಿ ಸಂಭಂದಪಟ್ಟ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮಂಗನನ್ನು ಸೆರೆಹಿಡಿದು ಜನರ ಜೀವವನ್ನು ಅಪಾಯದಿಂದ ಕಾಪಾಡಬೇಕಾಗಿದೆ.