
ಶಿರಸಿ: ಪ್ರಗತಿಪರ ಕೃಷಿಕ, ಧಾರ್ಮಿಕ ನಿಷ್ಠ, ಸ್ವರ್ಣವಲ್ಲೀ ಮಠದಲ್ಲಿ ಬಹುಕಾಲ ಅನ್ನ ಪ್ರಸಾದ ಸಮಿತಿ ಪ್ರಮುಖರಾಗಿದ್ದ ತಾರಗೋಡು ಅಂಬಳಿಕೆಮನೆಯ ದತ್ತಾತ್ರೇಯ ವೆಂಕಟರಮಣ ಹೆಗಡೆ (90)ಅವರು ಹೃದಯಾಘಾತದಿಂದ ನಿಧನರಾದರು.
ಅವರು ತಾರಗೋಡಿನ ಸ್ವಗೃಹದಲ್ಲಿ ಬುಧವಾರ ಮುಂಜಾನೆ ಇಹಲೋಕ ತ್ಯಜಿಸಿದ್ದು ಮೃತರು ಪತ್ನಿ, ಮೂವರು ಪುತ್ರರು ಅಪಾರ ಬಂಧು ಬಳಗ ಅಗಲಿದ್ದಾರೆ.
ಸ್ವರ್ಣವಲ್ಲೀ ಸಂಸ್ಥಾನದ ಈಗಿನ ಹಾಗೂ ಈ ಹಿಂದಿನ ಪೀಠಾಧೀಶರ ಒಡನಾಡಿಯಾಗಿದ್ದ ಅವರು, ಮಠದ ಅನ್ನ ಪ್ರಸಾದ ಹಾಗೂ ಉಗ್ರಾಣ ಸಮಿತಿ ಪ್ರಮುಖರಾಗಿದ್ದರು. ಸ್ವರ್ಣವಲ್ಲೀ ಮಠದಲ್ಲಿ 25 ವರ್ಷಕ್ಕೂ ಅಧಿಕ ಕಾಲ ಸಲ್ಲಿಸಿದ ಸಮಾಜಮುಖಿ ಸೇವೆಗೆ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಟಿಎಂಎಸ್ ಸೊಸೈಟಿ, ಭೈರುಂಬೆ ಸೊಸೈಟಿಗಳಲ್ಲಿ ಸಮ್ಮಾನ ನಡೆಸಲಾಗಿತ್ತು. ಈಚೆಗೆ ನಡೆದ ತಾರಗೋಡ ಶಾಲಾ ಅಮೃತ ಮಹೋತ್ಸವದಲ್ಲಿ ಕೂಡ ಗೌರವಿಸಲಾಗಿತ್ತು ಎಂಬುದು ಉಲ್ಲೇಖನೀಯ. ವಯಸ್ಸಾಗಿದ್ದರೂ ಯುವಕರಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ಅವರು ಕೊನೇ ಕ್ಷಣದ ತನಕವೂ ತೋಟ ಸುತ್ತಾಟ ಮಾಡಿ ಬಂದಿದ್ದು ವಿಶೇಷವಾಗಿತ್ತು.
ಮೃತರ ಪುತ್ರರಲ್ಲಿ ಆದರ್ಶ ಸೊಸೈಟಿ ಅಧ್ಯಕ್ಷ ಶ್ರೀಪಾದ ಹೆಗಡೆ ಒಬ್ಬರು. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ 5ಕ್ಕೆ ಸ್ವಗ್ರಾಮ ತಾರಗೋಡ ಅಂಬಳಿಕೆಮನೆಯಲ್ಲಿ ನಡೆಯಲಿದೆ.