ಭಟ್ಕಳ: ಸ್ಥಳೀಯ ಯುವಕ- ಯುವತಿಯರಿಗೆ ಉದ್ಯೋಗ ಒದಗಿಸಲು ಹೊಸದಾಗಿ ಕೈಗಾರಿಕಾ ಘಟಕಗಳನ್ನು ತಾಲೂಕಿನಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕಿನ ಯುವಕ- ಯುವತಿಯರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಸಾವಿರಾರು ಜನ ಐಟಿಐ, ಡಿಪ್ಲೋಮಾ, ಎಂಜಿನಿಯರ್ ಆಗಿ ಬೇರೆ ಬೇರೆ ಕಡೆಯಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೋವಿಡ್‍ನಿಂದಾಗಿ ಉದ್ಯೋಗ ತೊರೆದು ಊರಿಗೆ ಮರಳಿರುವ ಅನೇಕರು ಈಗ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಬೆಳಲಖಂಡ ಗ್ರಾಮದಲ್ಲಿ ಈಗಾಗಲೇ ಕೈಗಾರಿಕೆ ಸ್ಥಾಪನೆಗೆ ಜಾಗ ಮಂಜೂರಿಯಾಗಿದ್ದು, ಖಾಸಗಿ ಸಹಭಾಗಿತ್ವದ ಉದ್ದಿಮೆಯನ್ನು ಸ್ಥಾಪಿಸಿದ್ದಲ್ಲಿ ಯುವಜನತೆಗೆ ಬದುಕು ಕಟ್ಟಿಕೊಳ್ಳಲು ಸಂಜೀವಿನಿಯಂತಾಗುತ್ತದೆ. ಇಲ್ಲವೇ ಯಾವುದೇ ಖಾಸಗಿ ಕಂಪನಿ ಮುಂದೆ ಬಂದರು ಸಹ ಸ್ಥಳೀಯರಿಗೆ ಆದ್ಯತೆ ನೀಡುವ ಷರತ್ತಿನೊಂದಿಗೆ ಉದ್ದಿಮೆ ಆರಂಭಿಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಚಿನ್ ಎಮ್.ಆಚಾರಿ, ಮೋಹನ ಹೊನ್ನೆಗದ್ದೆ, ರಾಜೇಶ ಮಡಿವಾಳ, ಶಶಿಧರ ನಾಯ್ಕ, ಶ್ರೀಧರ ನಾಯ್ಕ, ತಿರುಮಲ ಮೊಗೇರ, ಜಯಂತಿ, ಭಾಸ್ಕರ ಗೊಂಡ, ಹೇಮಂತ ನಾಯ್ಕ ಮುಂತಾದವರಿದ್ದರು.