ಸಿದ್ದಾಪುರ: ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ಸೇವಾ ಸಮಿತಿಯಿಂದ ಆರೋಗ್ಯ ಇಲಾಖೆ, ತಾಲೂಕು ಸರಕಾರಿ ಆಸ್ಪತ್ರೆ, ಪೋಲೀಸ್ ಇಲಾಖೆ, ರೈತ ಸಂಘ (ಹಸಿರು ಸೇನೆ) ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಡಾ.ರಾಜಕುಮಾರ ಹುಟ್ಟು ಹಬ್ಬ ಹಾಗೂ ಉಚಿತ ಅರೋಗ್ಯ ಶಿಬಿರವನ್ನು ರೈತ ಸಂಘದ ತಾಲೂಕ ಅಧ್ಯಕ್ಷ ವೀರಭದ್ರ ನಾಯ್ಕ ಉದ್ಘಾಟಿಸಿ ಮಾತನಾಡಿದರು.
ಇಂದು ಮಕ್ಕಳೇ ತಮ್ಮ ವೃದ್ಧ ತಂದೆ-ತಾಯಿಗಳನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರುವ ಸ್ಥಿತಿ ನಿರ್ಮಾಣವಾಗಿದೆ. ಅನಾಥರ ಸೇವೆಯಲ್ಲಿ ದೇವರನ್ನು ಕಾಣುವಂತಾಗಬೇಕು. ನಾಗರಾಜ ನಾಯ್ಕರವರು ಒಂದು ಉತ್ತಮ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ್ ಪುರಾಣಿಕ್ ಮಾತನಾಡಿ, ಹೆತ್ತ ಮಕ್ಕಳು ಮಾಡದಿರುವ ಸೇವೆಯನ್ನು ನಾಗರಾಜ ಅವರು ಮಾಡುತ್ತಿದ್ದಾರೆ. ಆಶ್ರಯದಲ್ಲಿರುವ ರೋಗಿಗಳು ಕೇವಲ ಔಷಧಿಯಿಂದ ಮಾತ್ರ ಗುಣಮುಖರಾಗುವುದಿಲ್ಲ. ಅವರನ್ನು ಕಾಳಜಿ ನೋಡಿಕೊಳ್ಳುವುದು, ಪ್ರೀತಿಯ ಆರೈಕೆ ಸೇವೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾಗರಾಜ ನಾಯ್ಕರವರು ಅವರಿಗೆ ಈ ಪ್ರೀತಿಯಿಂದ ಕಾಳಜಿಯಿಂದ ಅವರ ಸೇವೆ ಮಾಡುತ್ತಿದ್ದಾರೆ. ಕರುನಾಡ ಕಣ್ಮಣಿ ಡಾ.ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಇಲ್ಲಿ ಆಚರಿಸಿರುವುದು ಒಂದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಶ್ರಯ ಧಾಮದ ಮುಖ್ಯಸ್ಥ ನಾಗರಾಜ್ ನಾಯ್ಕ ಮಾತನಾಡಿ, ನಾನು ಅಂದುಕೊಂಡಂತೆ ಸೇವೆ ಮಾಡಲು ಆಗುತ್ತಿಲ್ಲ. ನಾನು ಒಬ್ಬ ಅನಾಥನಾಗಿ ನನ್ನಂತೆಯೇ ಅನಾಥರಾಗಿರುವವರ ಸೇವೆಯನ್ನು ಮಾಡುತ್ತಿರುವುದು ಖುಷಿಕೊಟ್ಟಿದೆ. ನಿಮ್ಮೆಲ್ಲರ ಸಹಾಯ ಸಹಕಾರದಿಂದ ಮುಂದೆಯೂ ಉತ್ತಮ ಸೇವೆಯನ್ನು ನೀಡುತ್ತೇನೆ ಎಂದರು.
ಅನಾಥಾಶ್ರಮ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಎಂ.ಬಿ.ಕುಮಾರ್, ಡಾ.ರಾಘವೇಂದ್ರ ಉಡುಪ, ಪತ್ರಕರ್ತ ಸುರೇಶ ಮಡಿವಾಳ, ಡಾ.ಅನುಶ್ರೀ ನಾಯ್ಕ, ಆರೋಗ್ಯ ಇಲಾಖೆಯ ಪ್ರವೀಣ್ ಮಾತನಾಡಿ, ನಾಗರಾಜ್ ನಾಯ್ಕ್ರವರ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು.
ನಂತರ ಉಚಿತ ಆರೋಗ್ಯ ಶಿಬಿರ ನಡೆಯಿತು. ಚಂದ್ರು ಸೂರುಗುಪ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು. ಆಂಜನೇಯ ಈಡಿಗ ಹಾವೇರಿ ನಿರೂಪಿಸಿದರು.