ಅಂಕೋಲಾ: ಅಚವೆ ಪಹರೆ ಘಟಕದ ಕುಂಟಕಣಿ ದುರ್ಗಾಂಬಾ ಕ್ರೀಡಾಂಗಣದಲ್ಲಿ ನಡೆದ ಸ್ವಚ್ಛತೆ ಕಾರ್ಯಕ್ರಮದಲ್ಲಿ ತಾಲೂಕು ತಹಸೀಲ್ದಾರ ಉದಯ ಕುಂಬಾರರು ಭಾನುವಾರ ಭಾಗವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಇತ್ತೀಚೆಗೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ದುರ್ಗಾಂಬಾ ಕ್ರೀಡಾಂಗಣದಲ್ಲಿ ನಡೆದಿತ್ತು. ಕ್ರೀಡಾಂಗಣದ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯ ಇದ್ದದ್ದನ್ನು ಗಮನಿಸಿರುವ ಪಹರೆ ಘಟಕದ ಅಚವೆಯ ಸದಸ್ಯರು ಭಾನುವಾರದಂದು ಸ್ವಚ್ಛತೆ ಕಾರ್ಯ ನಡೆಸುವ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧಿಕಾರಿಗಳು ಭಾಗವಹಿಸಿ ಪಹರೆ ಸದಸ್ಯರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆಯಲ್ಲಿ ತೊಡಗಿದ್ದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಇಂತಹ ಗ್ರಾಮೀಣ ಪ್ರದೇಶದಲ್ಲಿ ಪಹರೆ ಘಟಕವು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು ಸೇರಿ ಸುತ್ತಮುತ್ತಲಿನ ಗ್ರಾಮಸ್ಥರೊಡಗೂಡಿ ಸ್ವಚ್ಛತೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ತಾಲೂಕಾಡಳಿತದಿಂದ ತಮ್ಮೆಲ್ಲರಿಗೂ ಅಭಿನಂದಿಸುತ್ತೇನೆ. ಇಂದು ಸಮಾಜದಲ್ಲಿ ತಾನು, ತನ್ನದು ಎಂಬ ಉನ್ನತ ಮನೋಭಾವ ಹೆಚ್ಚುತ್ತಿದ್ದು ಇದನ್ನು ತೊರೆದು ಸಮಾಜಕ್ಕಾಗಿ ಸ್ವಲ್ಪ ಸಮಯವನ್ನು ಕೊಟ್ಟು ಸಾಮಾಜಿಕ ಬದುಕು ನಡೆಸಬೇಕು ಎಂದು ತಿಳಿಸಿದರು. ಪಹರೆಯ ಸ್ವಚ್ಛತೆ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿಯೂ ಭಾಗವಹಿಸುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಹರೆಯ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಪಹರೆ ಅಂಕೋಲಾ ಪ್ರಮುಖರಾದ ರಾಮಚಂದ್ರ ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು. ತಿಮ್ಮಣ್ಣ ನಾಯಕ ವಂದಿಸಿದರು. ಪಹರೆ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.