ಭಟ್ಕಳ: ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ಜರಗುತ್ತಿರುವ ದೌರ್ಜನ್ಯ, ಕಿರುಕುಳ ಭಟ್ಕಳ ತಾಲೂಕಿನಲ್ಲಿ ಮುಂದುವರೆದಿದ್ದು ಹೋರಾಟಗಾರರ ವೇದಿಕೆಯು ಏ.30 ರಂದು ಭಟ್ಕಳ ಅರಣ್ಯಾಧಿಕಾರಿಯೊಂದಿಗೆ ಮುಕ್ತ ಚರ್ಚೆ ಜರುಗಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಏ.25, ಸೋಮವಾರದಂದು ಭಟ್ಕಳ ತಾಲೂಕಿನ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳಕ್ಕೆ ಒಳಗಾದ ಉಮ್ಮರಶೇಟ್, ಜಾಲಿ ಮುಂತಾದ ಪ್ರದೇಶಗಳಲ್ಲಿ ಭೇಟಿ ನೀಡಿ ಮಾತನಾಡಿ ಅರಣ್ಯ ಹಕ್ಕು ಕಾಯಿದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳು ಅರಣ್ಯವಾಸಿಗಳ ಪರ ಇದ್ದಾಗಲೂ ಅರಣ್ಯ ಸಿಬ್ಬಂದಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಕಾರ್ಯ ಜರುಗಿಸುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.
ಭಟ್ಕಳದಲ್ಲಿ ಅತೀ ಹೆಚ್ಚು ದೌರ್ಜನ್ಯ: ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ಅರಣ್ಯ ವಾಸಿಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯವನ್ನು ಅವಲೋಕಿಸಿದಾಗ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚುಅರಣ್ಯವಾಸಿಗಳು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಖೇದಕರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದರು.