ಸಿದ್ದಾಪುರ: ಇಂಡಿಯನ್ ಎಂಪಾಯರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್‍ನಿಂದ ತಾಲೂಕಿನ ಮುಗದೂರಿನ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾಗಿರುವ ನಾಗರಾಜ ನಾಯ್ಕ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಅವರ ಮಾನವೀಯ ಕಾರ್ಯಗಳು ಮತ್ತು ಸಮಾಜ ಸೇವೆಯನ್ನು ಗುರುತಿಸಿ ಹ್ಯೂಮೆನಿಟಿ & ಸೋಶಿಯಲ್ ಸರ್ವಿಸ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ನಾಗರಾಜ ನಾಯ್ಕ ಹಲವಾರು ವರ್ಷಗಳಿಂದ ಅನಾಥರ ಸೇವೆ ಮಾಡುತ್ತಿದ್ದು, ರಸ್ತೆ ಮೇಲೆ, ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಇರುವವರನ್ನು ಪೋಲೀಸರ ಹಾಗೂ ಸಾರ್ವಜನಿಕರ ಸಹಾಯದಿಂದ ಕರೆತಂದು ಅವರ ಆರೈಕೆ ಮಾಡಿ, ಪೋಷಣೆ ಮಾಡಿ ಅವರ ಕುಟುಂಬಗಳಿಗೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಬಂಧಿಕರು ಸಿಗದೆ ಇರುವವರನ್ನು ಆಶ್ರಮದಲ್ಲಿ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ.
ಇಲ್ಲಿಯವರೆಗೆ ಅನೇಕ ಅನಾಥ ಶವಗಳಿಗೆ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿರುವ ಇವರು, ಹಾಲಿ ಸಿದ್ದಾಪುರದ ಮುಗದೂರಿನಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಹೆಸರಿನಲ್ಲಿ ಅನಾಥಾಶ್ರಮ ನಡೆಸುತ್ತಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿರುವ ನಾಗರಾಜ ನಾಯ್ಕರಿಗೆ ರಾಜ್ಯದಾದ್ಯಂತ ಅನೇಕ ಗಣ್ಯರು ಅಭಿನಂದಿಸಿದ್ದಾರೆ.