ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರ ರಿಡ್ಲೆ ಜಾತಿಯ ಕಡಲಾಮೆಯೊಂದು ಇಟ್ಟಿರುವ ಮೊಟ್ಟೆಗಳಿಂದ ನಿನ್ನೆ ಮರಿಗಳು ಜನಿಸಿವೆ. ಕಳೆದ 45 ದಿವಸಗಳ ಹಿಂದೆ ಇಲ್ಲಿನ ಕಡಲ ತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಯೊಂದು ಮೊಟ್ಟೆ ಇಟ್ಟಿರುವ ಸ್ಥಳವನ್ನು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಅರಣ್ಯ ಸಿಬ್ಬಂದಿಗಳು ಗುರುತಿಸಿ ಅದಕ್ಕೆ ಸ್ಥಳದಲ್ಲಿ ಪಂಜರ ನಿರ್ಮಿಸಿ ಸಂರಕ್ಷಣೆ ಕ್ರಮ ಕೈಗೊಂಡಿತ್ತು.
ತಡರಾತ್ರಿ ಸುಮಾರು 55 ರಿಡ್ಲೆ ಜಾತಿಯ ಕಡಲಾಮೆ ಮರಿಗಳು ಜನಿಸಿದ್ದು ಸ್ಥಳೀಯ ಅರಣ್ಯ ಸಿಬ್ಬಂದಿಗಳು ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಿದರು. ವಲಯ ಅರಣ್ಯಾಧಿಕಾರಿ ವಿಕ್ರಂರವರ ಮಾರ್ಗದರ್ಶನದಲ್ಲಿ ನಿನ್ನೆ ತಡರಾತ್ರಿ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಕಡಲಾಮೆಮರಿಗಳನ್ನು ಸಮುದ್ರಕ್ಕೆ ಸೇರಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಈ ಭಾಗದ ಕಡಲತೀರದಲ್ಲಿ ಪ್ರತಿ ವರ್ಷವೂ ಡಿಸೆಂಬರ್ ದಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ತಮ್ಮ ಸಂತತಿ ಅಭಿವೃದ್ಧಿಗೋಸ್ಕರ ಮೊಟ್ಟೆ ಇಡುತ್ತವೆ. ಈ ಬಾರಿ 12ಕ್ಕೂ ಹೆಚ್ಚು ಕಡಲಾಮೆಗಳು ಇಲ್ಲಿನ ಕಡಲತೀರದಲ್ಲಿ ಇಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು ಅದರ ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತ ಬಂದಿದೆ.
ಮೀನುಗಾರರ ಅಸಮಾಧಾನ:
ಕಡಲಾಮೆಗಳು ಮಹಾವಿಷ್ಣುವಿನ ಅಪರಾವತಾರ ಎನ್ನುವದು ಸ್ಥಳೀಯ ಮೀನುಗಾರರ ನಂಬಿಕೆಯಾಗಿದ್ದು ಕಡಲತೀರದಲ್ಲಿ ಮೊಟ್ಟೆ ಇಡುವ ಕಡಲಾಮೆಗಳನ್ನು ಮತ್ತು ಅವುಗಳ ಮೊಟ್ಟೆಗಳನ್ನು ಜತನದಿಂದ ಮತ್ತು ಪೂಜನೀಯ ಭಾವನೆಯಿಂದ ಸಂರಕ್ಷಣೆ ಮಾಡಿ ಮರಿಗಳನ್ನು ಪೂಜಿಸಿ ಸಮುದ್ರಕ್ಕೆ ಸೇರಿಸಿ ಸಂಭ್ರಮ ಪಡುತ್ತಾರೆ. ಆದರೆ ಈ ಬಾರಿ ಸ್ಥಳೀಯರ ಅನುಪಸ್ಥಿತಿಯಲ್ಲಿ ಮತ್ತು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೇ ಮತ್ತು ಕಡಲಾಮೆ ಮರಿಗಳ ಪೂಜೆಗೆ ಸ್ಥಳೀಯರಿಗೆ ಅವಕಾಶ ನೀಡದೇ, ತಡರಾತ್ರಿಯೇ ಅರಣ್ಯ ಸಿಬ್ಬಂದಿಗಳು ಕಡಲಾಮೆಮರಿಗಳನ್ನು ಸಮುದ್ರಕ್ಕೆ ಬಿಟ್ಟಿರುವ ಬಗ್ಗೆ ಸ್ಥಳೀಯ ಮೀನುಗಾರರ ಮುಖಂಡ ರಾಜೇಶ ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.