• Slide
    Slide
    Slide
    previous arrow
    next arrow
  • ಇ- ತ್ಯಾಜ್ಯ ವಿಲೇವಾರಿಗಾಗಿ ಸಂಗ್ರಹಕ್ಕಿಳಿದ ಕಾರವಾರ ನಗರಸಭೆ

    300x250 AD

    ಕಾರವಾರ: ದಿನನಿತ್ಯ ಬಳಕೆ ಮಾಡುವ ಎಲೆಕ್ಟ್ರಾನಿಕ್ ವಸ್ತುಗಳ ತ್ಯಾಜ್ಯವನ್ನ ಸೂಕ್ತವಾಗಿ ವಿಲೇವಾರಿ ಮಾಡದೇ ಇದ್ದರೆ ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇಂತಹ ಅಪಾಯಕಾರಿ ಇ- ತ್ಯಾಜ್ಯ ಕಸವನ್ನ ಎಲ್ಲೆಂದರಲ್ಲಿ ಎಸೆಯುವುದನ್ನ ತಡೆಯುವ ನಿಟ್ಟಿನಲ್ಲಿ ಕಾರವಾರ ನಗರಸಭೆ ರಾಜ್ಯದಲ್ಲಿ ಮೊದಲ ಬಾರಿಗೆ ಇ-ತ್ಯಾಜ್ಯವನ್ನ ಸಹ ಸಂಗ್ರಹ ಮಾಡಲು ಮುಂದಾಗುವ ಮೂಲಕ ಮಾದರಿಯಾಗಿದೆ.

    ದುರಸ್ತಿಗೆ ಬಂದ ಟಿವಿ, ಮೊಬೈಲ್, ಸ್ಮಾರ್ಟ್ ಫೋನ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಓವನ್, ಪ್ರಿಂಟರ್, ಕೀ ಬೋರ್ಡ್, ಜೆರಾಕ್ಸ್ ಹೀಗೆ ಸುಮಾರು 23ಕ್ಕೂ ಅಧಿಕ ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನ ಇ- ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಈ ತ್ಯಾಜ್ಯ ಬಳಕೆ ಮಾಡಿದ ನಂತರ ಹಾಗೇಯೇ ಎಸೆದುಬಿಡುತ್ತಾರೆ. ಇದರಿಂದ ಇ-ತ್ಯಾಜ್ಯದಲ್ಲಿನ ಆರ್ಸೆನಿಕ್, ಸೀಸ, ಪಾದರಸ, ಕ್ಯಾಡಿಯಂನಂಥ ಭಾರ ಲೋಹಗಳು ಜಲಮೂಲ ಮತ್ತು ಮಣ್ಣು ಸೇರಿ ಪರಿಸರದ ಮಾಲಿನ್ಯವಾಗುತ್ತದೆ.

    ಇದಲ್ಲದೇ ಮನುಷ್ಯನ ಆರೋಗ್ಯದ ಮೇಲೂ ದೊಡ್ಡ ಪರಿಣಾಮ ಬೀಳುತ್ತದೆ. ಇಂತಹ ಅಪಾಯಕಾರಿ ಇ-ತ್ಯಾಜ್ಯ ಉತ್ಪಾದನೆಯಲ್ಲಿ ಭಾರತ 5 ನೇ ಸ್ಥಾನದಲ್ಲಿದ್ದು ಪ್ರತಿ ವರ್ಷ ಅಂದಾಜು ಸುಮಾರು 18.5 ಲಕ್ಷ ಟನ್‍ನಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದು ಪರಿಸರಕ್ಕೆ ಸೇರಿ ಮನಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರವಾರ ನಗರಸಭೆ ಇ-ತ್ಯಾಜ್ಯ ಸಂಗ್ರಹಣೆ ಮಾಡುವ ಮೂಲಕ ನಗರದಲ್ಲಿ ಇ-ತ್ಯಾಜ್ಯ ಕಡಿವಾಣಕ್ಕೆ ಮುಂದಾಗಿದೆ.

    ಸದ್ಯ ನಗರಸಭೆ ವತಿಯಿಂದ ಪ್ರತಿನಿತ್ಯ ಕಸವನ್ನ ಸಂಗ್ರಹ ಮಾಡಲಾಗುತ್ತಿದೆ. ಹಸಿ ಕಸ ಓಣ ಕಸವನ್ನ ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿದೆ. ಇನ್ನು ಕೆಲ ದಿನಗಳ ಹಿಂದೆ ಜನರ ಆರೋಗ್ಯದ ದೃಷ್ಟಿಯಿಂದ ನಗರದಲ್ಲಿ ಹೋಟೆಲ್‍ಗಳಲ್ಲಿ ಕರಿದ ಎಣ್ಣೆಯನ್ನೂ ಸಹ ಸಂಗ್ರಹ ಮಾಡುವ ಕಾರ್ಯಕ್ಕೆ ನಗರಸಭೆ ಮುಂದಾಗಿತ್ತು. ಇದೀಗ ಇ-ತ್ಯಾಜ್ಯ ಸಂಗ್ರಹ ಮಾಡುವ ಮೂಲಕ ನಗರದಲ್ಲಿ ಅಪಾಯಕಾರಿ ಮಾಲಿನ್ಯ ತಡೆಗಟ್ಟುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ.

    ಈಗಾಗಲೇ ನಗರದ ನಗರಸಭೆ ಆವರಣದಲ್ಲಿ, ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎರಡು ಪ್ರತ್ಯೇಕ ಬಾಕ್ಸ್ ಗಳನ್ನ ಇ-ತ್ಯಾಜ್ಯ ಸಂಗ್ರಹಕ್ಕಾಗಿಯೇ ಇಡಲಾಗಿದೆ. ಅಲ್ಲದೇ ನಗರದಲ್ಲಿನ ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳಿಗೆ ಇ-ತ್ಯಾಜ್ಯವನ್ನ ನಗರಸಭೆ ಇಟ್ಟ ಬಾಕ್ಸ್ ಗಳಿಗೆ ಹಾಕುವಂತೆ ತಿಳಿಸಲಾಗಿದೆ. ಇನ್ನು ಸಾರ್ವಜನಿಕರು ಇ-ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವುದನ್ನ ತಡೆಯಲು ಪ್ರತಿನಿತ್ಯ ಕಸದ ವಾಹನದ ಮೂಲಕ ಇ-ತ್ಯಾಜ್ಯ ಕಸ ಎಸೆಯದಂತೆ ನಗರಸಭೆ ಇಟ್ಟಿರುವ ಬಾಕ್ಸ್ ಗಳಿಗೆ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದೆ.

    300x250 AD

    ನಗರದಲ್ಲಿ ಸುಂದರ ಪರಿಸರ ನಿರ್ಮಾಣಕ್ಕಾಗಿ ನಗರಸಭೆ ನಾನಾ ಕಾರ್ಯಗಳಿಗೆ ಮುಂದಾಗಿದ್ದು, ಇದರ ಜೊತೆ ಕಸ ಸಂಗ್ರಹದ ವಿಚಾರದಲ್ಲಿಯೂ ರಾಜ್ಯದಲ್ಲಿ ಮುಂಚೂಣಿಯಲ್ಲಿತ್ತು. ಇದೀಗ ಅಪಾಯಕಾರಿ ಇ-ತ್ಯಾಜ್ಯ ಕಸವನ್ನ ಪರಿಸರಕ್ಕೆ ಸೇರುವುದನ್ನ ತಡೆಯುವ ನಿಟ್ಟಿನಲ್ಲಿ ಸಂಗ್ರಹಕ್ಕೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿಯೂ ನಗರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಇ-ತ್ಯಾಜ್ಯ ವಿಲೇವಾರಿ ಮಾಡುವ ಕೇಂದ್ರ ಕಾರವಾರಕ್ಕೆ ಸಮೀಪದಲ್ಲಿ ಮೂರು ಕೇಂದ್ರಗಳಿದ್ದು ಅವರ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಸಂಗ್ರಹಿಸಿದ ಇ-ತ್ಯಾಜ್ಯವನ್ನ ವಿಲೇವಾರಿ ಘಟಕಕ್ಕೆ ಕಳುಹಿಸಿಕೊಡಲಾಗುವುದು. ಈಗಾಗಲೇ ವಾಹನಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡಿದ್ದು ಭವಿಷ್ಯದಲ್ಲಿ ಇ-ತ್ಯಾಜ್ಯ ಪರಿಸರ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇ -ತ್ಯಾಜ್ಯವನ್ನ ಎಲ್ಲೆಂದರಲ್ಲಿ ಎಸೆಯದೇ ನಗರಸಭೆ ನಿಗದಿತ ಸ್ಥಳದಲ್ಲಿ ಇಟ್ಟ ಇ-ತ್ಯಾಜ್ಯ ಸಂಗ್ರಹದ ಬಾಕ್ಸ್‍ಗಳಿಗೆ ಹಾಕಬೇಕಾಗಿದೆ.–ಆರ್.ಪಿ.ನಾಯ್ಕ, ಪೌರಾಯುಕ್ತ

    ಇ-ತ್ಯಾಜ್ಯದ ಅಪಾಯದ ಬಗ್ಗೆ ಸಾರ್ವಜನಿಕರಿಗೆ ಇನ್ನು ಅರಿವಿಲ್ಲ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳಲಿದ್ದು, ಬಹುತೇಕ ಜನರು ಇದರ ಅರಿವಿಲ್ಲದೇ ಪ್ರಕೃತಿಯಲ್ಲಿ ಇ-ತ್ಯಾಜ್ಯ ಎಸೆದು ಮಣ್ಣಿನ ಜೊತೆ ಸೇರುವಂತೆ ಮಾಡುತ್ತಿದ್ದಾರೆ. ಇಂತಹ ಇ-ತ್ಯಾಜ್ಯಕ್ಕೆ ಕಡಿವಾಣ ಹಾಕಲು ಅದರ ಸಂಗ್ರಹಕ್ಕೆ ಮುಂದಾದ ನಗರಸಭೆ ಕಾರ್ಯ ಉತ್ತಮವಾಗಿದ್ದು ಜನರು ಇದಕ್ಕೆ ಸಹಕರಿಬೇಕಾಗಿದೆ.–ನಾಗರಾಜ ನಾಯಕ, ಕಾರವಾರ

    Share This
    300x250 AD
    300x250 AD
    300x250 AD
    Leaderboard Ad
    Back to top