ಕಾರವಾರ: ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಂಗಾ ನಾಚ್ ಮಾಡುತ್ತಿದೆ. ಮಾನ ಮರ್ಯಾದೆ ಬಿಟ್ಟು ಭ್ರಷ್ಟಾಚಾರಕ್ಕಿಳಿದಿದ್ದಾರೆ. ಎಲ್ಲವನ್ನೂ ನಾನೇ ಮಾಡುತ್ತೇನೆಂಬ ಶಾಸಕಿಯನ್ನ ನೋಡಿದರೆ ಇವರೇನು ಲೇಡಿ ಹಿಟ್ಲರಾ? ಎಂದೆನಿಸಿಬಿಡುತ್ತದೆ. ಜನರಿಗಾಗಿ ಇವರಿದ್ದಾರೋ ಅಥವಾ ಜನರು ಇವರಿಗಿದ್ದಾರೋ? ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಮಾತನಾಡಬೇಕಿದೆ ಎಂದು ಸ್ಥಳೀಯ ಶಾಸಕಿಗೆ ಕೋರಿ ಒಂದೂವರೆ ವರ್ಷ ಕಳೆದಿದೆ, ಆದರೆ ಈವರೆಗೂ ನಮಗೆ ಅವರೊಂದಿಗೆ ಮಾತುಕತೆಗೆ ಸಮಯಾವಕಾಶ ನೀಡಿಲ್ಲ ಎಂದು ಅವರು ದೂರಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ 114 ಕಾಮಗಾರಿಗಳಿಗೆ 16 ಕೋಟಿ ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಬೇಕೆಂದು ಶಾಸಕಿಯ ಲೆಟರ್ ಹೆಡ್‌ನಲ್ಲಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಕೆಆರ್‌ಐಡಿಎಲ್‌ಗೆ ಜಿಲ್ಲೆಯಲ್ಲಿ ಕೇವಲ ಎರಡು ಬೊಲೆರೋ, ಒಂದು ಕಾರು, ಅಧಿಕಾರಿ- ಸಿಬ್ಬಂದಿಗೆ ಸೇರಿ ಆರು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ನಿರ್ಮಾಣ ಸಾಮಗ್ರಿಗಳು ಇವರ ಬಳಿ ಇಲ್ಲ. ಇಂಥ ಸಂಸ್ಥೆಗೆ ಕಾಮಗಾರಿಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ದೂರು ಕೂಡ ಸಲ್ಲಿಸಿದ್ದೇನೆ. ಆದರೂ ಕಾಮಗಾರಿಗಳನ್ನು ಅದೇ ಸಂಸ್ಥೆಗೆ ನೀಡುವುದನ್ನು ಮುಂದುವರಿಸಲಾಗಿದೆ. ಕಾರಣ ಈ ಸಂಸ್ಥೆ ಇವರ ಭ್ರಷ್ಟಾಚಾರಕ್ಕೆ ಸಂಪರ್ಕ ಸೇತುವಾಗಿದೆ ಎಂದು ಆರೋಪಿಸಿದರು.
ಟೆಂಡರ್ ಕರೆದು ಕಾಮಗಾರಿಗಳನ್ನು ನೀಡಬೇಕೆಂಬ ಆದೇಶವಿದ್ದರೂ ಇದೊಂದೇ ಸಂಸ್ಥೆಗೆ ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಬಂದ ಅನುದಾನ ಸುಮಾರು 61.38 ಕೋಟಿ ರೂ.ಗಳ ಕಾಮಗಾರಿಗಳು ಕೆ. ಆರ್. ಐ.ಡಿ.ಎಲ್ ಸಂಸ್ಥೆಗೆ ನೀಡಲಾಗಿದೆ. ಹಾಗಿದ್ದರೆ ಸರ್ಕಾರಕ್ಕೆ ಹಣ ತುಂಬಿ, ಅಧಿಕೃತವಾಗಿ ಪರವಾನಗಿಗಳನ್ನೆಲ್ಲ ಪಡೆದುಕೊಂಡು ಗುತ್ತಿಗೆದಾರರಾಗಿರುವುದು ಯಾತಕ್ಕೆ? ನಾವೆಲ್ಲ ಬೀದಿಗೆ ಬೀಳಬೇಕಾ? ಕೆಎಆರ್‌ಐಡಿಎಲ್‌ಗೆ ಕೊಡುವ ಬದಲು ನಮ್ಮ ಗುತ್ತಿಗೆದಾರರ ನೋಂದಾಯಿತ ಸಂಘಕ್ಕೆ ನೀಡಿ, ಗುಣಮಟ್ಟದ ಕಾಮಗಾರಿಗಳ ಗ್ಯಾರೆಂಟಿ ನೀಡಿ ಕೆಲಸ ಮಾಡಿಕೊಡುತ್ತೇವೆ ಎಂದು ಸವಾಲೆಸೆದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕೇವಲ ಕಾರವಾರಕ್ಕಷ್ಟೇ ಅಲ್ಲ, ಜಿಲ್ಲೆಗೆ ಒಟ್ಟು 70 ಕೋಟಿ ಬಂದಿತ್ತು. ಅದರಲ್ಲಿ 19 ಕೋಟಿ ಕುಮಟಾಕ್ಕೆ, 20 ಕೋಟಿ ಭಟ್ಕಳ ಕ್ಷೇತ್ರಕ್ಕೆ, 10 ಕೋಟಿ ಶಿರಸಿ, 5 ಕೋಟಿ ಹಳಿಯಾಳಕ್ಕೆ ಬಂದಿತ್ತು. ಕಾರವಾರ, ಭಟ್ಕಳದ ಎಲ್ಲಾ ಕಾಮಗಾರಿ, ಕುಮಟಾದ 13.50 ಕೋಟಿಯಷ್ಟು ಕಾಮಗಾರಿ ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಕುಮಟಾ ಶಾಸಕರು ಉಳಿದ ಅನುದಾನದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ್ದಾರೆ. ಇದನ್ನು ಗಮನಿಸಿದರೆ ಕರಾವಳಿ ಶಾಸಕರು ಒಂದೇ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿದುಬರುತ್ತದೆ ಎಂದರು.
ಇದು ಹೀಗೆ ಮುಂದುವರಿದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿ ನಾನು ಕಾಮಗಾರಿಗಳಿಗೆ ಸಂಬಂಧಿಸಿದ ಹಗರಣಗಳನ್ನ ಸಂಘದ ಮೂಲಕ, ಕಾಮಗಾರಿಗಳನ್ನ ಹೊರತುಪಡಿಸಿ ಇತರ ವಿಷಯಗಳಿಗೆ ನನ್ನ ಬೇರೆ ವೇದಿಕೆಯಡಿ ಬಯಲಿಗೆಳೆಯುವ ಕಾರ್ಯ ಇನ್ನು ಮುಂದೆ ಮಾಡುತ್ತೇನೆ. ಯಾವುದೇ ಭ್ರಷ್ಟಾಚಾರ ಬಯಲಿಗೆಳೆಯಬೇಕಾದರೂ ಅದಕ್ಕೆ ದಾಖಲೆಗಳನ್ನಿಟ್ಟೇ ಬಯಲಿಗೆಳೆಯುತ್ತೇನೆ. ಕಾನೂನನ್ನ ಬಳಸಿಕೊಂಡು ಶಾಸಕರಾದ ರೂಪಾಲಿ ಸಂತೋಷ. ನಾಯ್ಕ ಮತ್ತು,ಸದ್ರಿ ಕಾಮಗಾರಿಗೆ ಆದೇಶ ನೀಡಿದ ಸರಕಾರದ ಅಧೀನ ಕಾರ್ಯದರ್ಶಿಯನ್ನ ಎದುರುದಾರರನ್ನಾಗಿ ಮಾಡಿ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.