ದಾಂಡೇಲಿ: ಇಲಿಯಾಸ ಕಾಟಿಯವರು ಕಾಳಿ ಉತ್ಸವವನ್ನು ಹಮ್ಮಿಕೊಳ್ಳುವುದರ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹಳಿಯಾಳದ ವಕೀಲ ಮೇಘರಾಜ ಮೇತ್ರಿ ಹೇಳಿದರು.
ಇಲಿಯಾಸ ಕಾಟಿ ಸಂಸ್ಥಾಪಕತ್ವದ ಕಾಳಿ ಉತ್ಸವ ಸಮಿತಿಯ ಆಶ್ರಯದಲ್ಲಿ ಹಳೆ ನಗರಸಭಾ ಮೈದಾನದಲ್ಲಿ ಆಯೋಜಿಸಲಾದ ಐದು ದಿನಗಳ 9ನೇ ವರ್ಷದ ಕಾಳಿ ಉತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಕಲಾ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಸುಲಭ ಸಾಧ್ಯ ಎಂದು ಹೇಳಿ ಕಾಳಿ ಉತ್ಸವಕ್ಕೆ ಶುಭ ಕೋರಿದರು.
ನಗರದ ಸಮಾಜ ಸೇವಕರಾದ ದಾದಾಪೀರ್ ನದೀಮುಲ್ಲಾರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಒಂದು ಕಾರ್ಯಕ್ರಮ ಆಯೋಜಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದಾಗ್ಯೂ ಇಲಿಯಾಸ್ ಕಾಟಿಯವರು ಒಂಟಿ ಸಲಗನಂತೆ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ರೀತಿ ಮಾತ್ರ ಮೆಚ್ಚುವಂತಹದ್ದಾಗಿದೆ. ನಿಸ್ವಾರ್ಥ ಭಾವನೆಯಿಂದ ಕಲಾ ಸೇವೆ ಮಾಡುತ್ತಿರುವ ಇಲಿಯಾಸ್ ಕಾಟಿ ಮತ್ತು ಕಾಳಿ ಉತ್ಸವ ಸಮಿತಿಯ ಕಲಾರಾಧನೆ ಮಾದರಿಯಾಗಿದೆ. ಕಾಳಿ ಉತ್ಸವದ ಮೂಲಕ ಸ್ಥಳೀಯ ಪ್ರತಿಭೆಗಳು ಮತ್ತಷ್ಟು ಯಶಸ್ಸಿನ ಶಿಖರವನ್ನೇರಲೆಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹಳಿಯಾಳದ ಯುವ ವಕೀಲ ಮಂಜುನಾಥ ಮೇದಾರ ಅವರು ಕಾಳಿ ಉತ್ಸವ ಸೌಹಾರ್ದತೆಯನ್ನು ಸಾರುವ ಉತ್ಸವವಾಗಿ ಮೂಡಿ ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಳಿಉತ್ಸವ ಸಮಿತಿಯ ಸಂಸ್ಥಾಪಕ ಇಲಿಯಾಸ ಕಾಟಿ, ಈ ಬಾರಿ 9ನೇ ವರ್ಷದ ಕಾಳಿ ಉತ್ಸವನನ್ನು 5 ದಿನಗಳವರೆಗೆ ಆಯೋಜಿಸಲಾಗಿದೆ. ಕಾಳಿ ಉತ್ಸವಕ್ಕೆ ಸರ್ವ ರೀತಿಯಿಂದಲೂ ಸಹಕರಿಸಿ, ಪ್ರೋತ್ಸಾಹಿಸುತ್ತಿರುವ ದಾನಿಗಳ ಸಹಕಾರವೆ ಕಾರ್ಯಕ್ರಮದ ಯಶಸ್ಸಿಗೆ ಬಹುದೊಡ್ಡ ಶಕ್ತಿಯಾಗಿದೆ ಎಂದು ಹೇಳಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಪ್ರಮುಖರುಗಳಾದ ಶಿವಾಜಿ ಪಾಟೀಲ, ಅನಿತಾ ಮೇಘರಾಜ ಮೇತ್ರಿ, ಮಹಮ್ಮದಾಲಿ, ಭರತ್ ಬಾಗಡೆ, ಇಮಾಮ್ ಬೇಲೂರು, ಗಿರೀಶ ಶಿರೋಡ್ಕರ್, ಸಾಯಿನಾಥ ಟೈಲರ್, ಅಬ್ದುಲ್ ಬಿಜಾಪುರ ಮೊದಲಾದವರು ಉಪಸ್ಥಿತರಿದ್ದರು. ಇಲಿಯಾಸ ಕಾಟಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಬ್ದುಲ್ ರೆಹಮಾನ್ ನಿರೂಪಿಸಿ, ವಂದಿಸಿದರು. ಆನಂತರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.