ಶಿರಸಿ; ಸತತ ಪಠ್ಯ ಹಾಗೂ ಪಠ್ಯೇತರದ ಬಹುಮುಖ ಸೃಜನಶೀಲ ಸಾಧನೆಯ ಸುದ್ದಿಯಲ್ಲಿರುವ ಶಿರಸಿ ಲಯನ್ಸ ಶಾಲೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ ದೊರೆತಿದೆ.
ಶಿರಸಿ ಲಯನ್ಸ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ 11ನೇ ಅಖಿಲ ಭಾರತ ಮಟ್ಟದ ಅಂತರ ಶಾಲಾ ಸ್ಫರ್ಧೆಯಲ್ಲಿ ದಕ್ಷಿಣ ವಲಯಕ್ಕೆ ಎರಡನೇ ಸ್ಥಾನ ಗಳಿಸಿರುತ್ತಾಳೆ. ಬಹುಮುಖ ಪ್ರತಿಭೆಯಗಿರುವ ಅನನ್ಯಾ ಈ ಹಿಂದೆ ಕೂಡಾ ‘ ಅಸಾಧಾರಣ ಭಾಲಪ್ರತಿಭೆ’,’ಬಹುಮುಖ ವಿದ್ಯಾರ್ಥಿ ಪ್ರತಿಭೆ’, ‘ಕರುನಾಡ ಕಲಾಕುಸುಮ’ ಇಂತಹ ಹಲವಾರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವದನ್ನು ಇಲ್ಲಿ ಸ್ಮರಿಸಬಹುದು.
ರೂಟ್ 2 ರೂಟ್ ಹಾಗೂ ವಿರ್ಸಾ ಸಂಸ್ಥೆ ಆನ್ ಲೈನ್ ಮೂಲಕ 14ಕ್ಕೂ ಹೆಚ್ಚು ಸಾಂಸ್ಕೃತಿಕ ವಿಭಾಗಗಳ ಅಂತರ್ಜಾಲ ತರಬೇತಿ ತರಗತಿಗಳನ್ನು ನಡೆಸುತ್ತಿದೆ. ಇದೇ ಸಂಸ್ಥೆ ಆನ್ ಲೈನ್ ಮೂಲಕ ಸಂಘಟಿಸಿದ ಅಖಿಲ ಭಾರತ ಮಟ್ಟದ ಅಂತರಶಾಲಾ ಸ್ಫರ್ಧೆಯಲ್ಲಿ ಅನನ್ಯಾ ಭಾಗವಹಿಸಿ, ವಿಜೇತಳಾಗಿ ರಾಷ್ಟ್ರಮಟ್ಟದಲ್ಲಿ ಶಿರಸಿ ಲಯನ್ಸ ಶಾಲೆಯ ಹೆಸರನ್ನು ಮೆರೆಸಿದ್ದಾಳೆ.
ದೇಶದ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಶಿರಸಿ ನಗರದ ಲಯನ್ಸ ಶಾಲೆಯ ಬಾಲಕಿ ಈ ಪ್ರಶಸ್ತಿಗೆ ಭಾಜನರಾಗಿರುವುದು ತುಂಬಾ ಹೆಮ್ಮೆಯ ಸಂಗತಿ. ಇದು ಶಿರಸಿ ನಗರಕ್ಕೂ ಹೆಮ್ಮೆಯ ಸಂಗತಿ. ಕುಮಾರಿ ಅನನ್ಯಾ ಹಾಗೂ ಅವರ ಪಾಲಕರಾದ ಲಯನ್ಸ ಸದಸ್ಯರಾದ ಲಯನ್ ಅಶ್ವತ್ಥ ಹೆಗಡೆ, ಲಯನ್ ಜ್ಯೋತಿ ಹೆಗಡೆ ದಂಪತಿಗಳಿಗೆ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸರ್ವಸದಸ್ಯರು, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಹಾರ್ದಿಕವಾಗಿ ಶುಭ ಹಾರೈಸಿದೆ.