ಸಿದ್ದಾಪುರ: ರಾಜ್ಯದಲ್ಲಿ ಜಲ ಸಂಪತ್ತಿದೆ. ಅದರೆ ಅದರ ಸದ್ಭಳಕೆ ಸರಿಯಾಗಿ ಆಗುತ್ತಿಲ್ಲ. ನಮ್ಮಲ್ಲಿ ಬೀಳುವ ಮಳೆಯ ನೀರನ್ನು ನಾವೇ ಬಳಸಿಕೊಳ್ಳುವಂತಾಗಬೇಕು ಎಂದು ಜೆಡಿಎಸ್ ಪಕ್ಷದ ಜನತಾ ಜಲಧಾರೆಯ ಉಸ್ತುವಾರಿ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ತಾಲೂಕಿನ ಅತ್ತೀಸವಲಿನಲ್ಲಿ ನಡೆದ ಜೆಡಿಎಸ್ ಪಕ್ಷ ನಡೆಸುತ್ತಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಅವರು ಬುಧವಾರ ಸಂಜೆ ಮಾತನಾಡಿದರು. ರಾಜ್ಯದಲ್ಲಿನ ಜಲಸಂಪತ್ತು ಸರಿಯಾಗಿ ಸದ್ಬಳಕೆ ಆಗಬೇಕು ಎನ್ನುವುದು ಜೆಡಿಎಸ್ ವರಿಷ್ಠ ಮಾಜಿ ಪ್ರದಾನಿ ದೇವೇಗೌಡ ಅವರದ್ದು. ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಜನತಾ ಜಲಧಾರೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮಲ್ಲಿಯ ನೀರು ಇಲ್ಲಿಯೇ ಬಳಕೆ ಅಗಬೇಕು. ಜಿಲ್ಲೆಯ ನದಿ ನೀರಿನ ಬಳಕೆ ಸಮರ್ಪಕವಾಗಿ ಆಗಬೇಕು. ನೀರಿನ ತೊಂದರೆಯಿಂದ ಸಾಂಪ್ರದಾಯಿಕ ಕೃಷಿಗಳು ಮರೆಯಾಗುತ್ತಿದೆ. ನೀರಿನ ಬಳಕೆಯಿಂದ ಕೃಷಿ ಉತ್ಪನ್ನಗಳು ಹೆಚ್ಚಾಗಬೇಕೆಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಮಾತನಾಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳಿಗೆ ರಾಜ್ಯದ ಜನತೆ ಬೆಂಬಲ ನೀಡಬೇಕು. ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಇದರಿಂದ ರೈತರು, ಬಡವರು ಸಂಕಟ ಪಡುವಂತಾಗಿದೆ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ನ ಕಾರ್ಯದರ್ಶಿ ಸತೀಶ ಹೆಗಡೆ, ರಮೇಶ ನಾಯ್ಕ ಹೊನ್ನಾವರ, ವಿ.ಎಂ.ಭಂಡಾರಿ, ಮುನಾಪ್ ಮಿರ್ಜಾನಕರ್, ತುಕಾರಾಂ ಮುಂಡಗೋಡ, ಸಂಗೂರಮಠ ಮುಂಡಗೋಡ, ಪರಮೇಶ್ವರ ನಾಯ್ಕ, ಚಿನ್ನು ಗೌಡ, ಕೃಷ್ಣ ಗೌಡ, ಮಂಜುನಾಥ ಗೌಡ ಇತರರಿದ್ದರು.
ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಕೆ.ಎಂ.ಹೆಗಡೆ ಹೊಳ್ಳಾಡೆ, ಕಮಲಾಕರ ನಾಯ್ಕ ಹೇರೂರು ನಿರ್ವಹಿಸಿದರು.
ಇದಕ್ಕೂ ಪೂರ್ವದಲ್ಲಿ ಬಾಳೂರು-ಕರ್ಜಗಿ ಸಮೀಪ ಅಘನಾಶಿನಿ ಹಾಗೂ ಶಾಲ್ಮಲಾ ನದಿಯ ಸಂಗಮದಲ್ಲಿ ಪೂಜೆ ಸಲ್ಲಿಸಿ ಜನತಾ ಜಲಧಾರೆಗೆ ಜಿಲ್ಲಾ ಅಧ್ಯಕ್ಷ ಗಣಪಯ್ಯ ಗೌಡ ಅವರು ಪೂರ್ಣಕುಂಬಕ್ಕೆ ಜಲವನ್ನು ತುಂಬಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.