ಅಂಕೋಲಾ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿದೆ. ಇನ್ನು ವರ್ಷದ ಮುಂಚೆಯೇ ಬಿಜೆಪಿ ಸಿದ್ದತೆ ಪ್ರಾರಂಭಿಸಿದ್ದು, ಚುನಾವಣಾ ಸಿದ್ಧತೆಯಲ್ಲಿ ಮುಂದೆ ಹೋದರೆ ವಿರೋಧ ಪಕ್ಷವಾದ ಕಾಂಗ್ರೆಸ್ ಮಾತ್ರ ಇನ್ನು ಹಿಂದೆ ಉಳಿದಿದೆ ಎನ್ನಲಾಗಿದೆ.
ರಾಜ್ಯದಲ್ಲಿ ವಿಧಾನಸಭೆಯ ಅವಧಿ ಏಪ್ರಿಲ್ ನಲ್ಲಿ ಮುಕ್ತಾಯವಾಗುವ ನಿಟ್ಟಿನಲ್ಲಿ ಚುನಾವಣೆ ಸಿದ್ದತೆ ಪ್ರಾರಂಭವಾಗಿದೆ. ಇನ್ನು ಪ್ರಮುಖವಾಗಿ ಆಡಳಿತ ಪಕ್ಷವಾದ ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂದು ತಯಾರಿಗಿಳಿದಿದ್ದರೇ ವಿರೋಧ ಪಕ್ಷವಾದ ಕಾಂಗ್ರೆಸ್ ಸರ್ಕಾರದ ಕೆಲ ಲೋಪಗಳ ವಿರುದ್ದ ಹೋರಾಟದಲ್ಲಿ ನಿರತವಾಗಿದ್ದು ಸಿದ್ದತೆಯಲ್ಲಿ ಮಾತ್ರ ನಿಧಾನಗತಿಯಲ್ಲಿಯೇ ಸಾಗುತ್ತಿದ್ದು ಇನ್ನು ಜೆಡಿಎಸ್ ಮಾತ್ರ ಬೆಂಗಳೂರು, ಮೈಸೂರು ಭಾಗದಲ್ಲಿ ಮಾತ್ರ ತಯಾರಿಗಿಳಿದಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿ.ಎಸ್ ಯಡಿಯೂರಪ್ಪನವರನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಬಹುತೇಕ ಲಿಂಗಾಯತ ಮತಗಳ ಬೆಂಬಲ ಬಿಜೆಪಿಗೆ ಸಿಕ್ಕ ಪರಿಣಾಮ ರಾಜ್ಯದಲ್ಲಿ ಅಧಿಕಾರಕ್ಕೆ ಏರಲು ಸಹಕಾರಿಯಾಗಿತ್ತು. ಆದರೆ ಈ ಬಾರಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದು ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಇರುವ ಹಿನ್ನಲೆಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗಬೇಕಾಗಿದೆ.
ಯಡಿಯೂರಪ್ಪನವರ ನೇತೃತ್ವ ಇಲ್ಲದೇ ಇರುವ ಹಿನ್ನಲೆಯಲ್ಲಿ ಹಿನ್ನಡೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ವರ್ಷದ ಮುಂಚೆಯೇ ಸಿದ್ದತೆಗೆ ಮುಂದಾಗಿದೆ. ಈಗಾಗಲೇ ರಾಷ್ಟ್ರ ಮಟ್ಟದ ನಾಯಕರು ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನ ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಮುಂದಾಗಿದ್ದಾರೆ. ಇದರ ಹಿನ್ನಲೆಯಲ್ಲಿಯೇ ಬಳ್ಳಾರಿಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲಾಗಿತ್ತು. ಇದಲ್ಲದೇ ಶಿವಮೊಗ್ಗದಲ್ಲಿ ಸಿಎಂ ನೇತೃತ್ವದಲ್ಲಿಯೇ ವಿಭಾಗ ಮಟ್ಟದ ಕಾರ್ಯಕಾರಣಿ ಸಭೆ ನಡೆಸಿ ಕಾರ್ಯಕರ್ತರಿಂದ ಮಾಹಿತಿ ಪಡೆದು ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನ ಹುರಿದುಂಬಿಸುವ ಕಾರ್ಯ ಮಾಡಲಾಗಿದೆ.
ಇನ್ನು ಜಿಲ್ಲಾ ಮಟ್ಟದಲ್ಲಿ ಪ್ರಶಿಕ್ಷಣವರ್ಗಗಳನ್ನ ಮಾಡಿ ಹಿರಿಯ ನಾಯಕರುಗಳಿಂದ ಕಾರ್ಯಕರ್ತರಿಗೆ ಸಂಘಟನೆ ಇನ್ನಷ್ಟು ಚುರುಕಿನಿಂದ ಮಾಡಲು ಹುರಿದುಂಬಿಸುವ ಕಾರ್ಯ ಮಾಡುತ್ತಿದ್ದು ಇದರೊಟ್ಟಿಗೆ ತಳಹಂತದವರೆಗೂ ಸಂಘಟನೆಯನ್ನ ಚುರುಕುಗೊಳಿಸುವ ಕಾರ್ಯಕ್ಕೆ ಬಿಜೆಪಿ ಇಳಿಯುವ ಮೂಲಕ ಚುನಾವಣೆ ಸಿದ್ಧತೆಯಲ್ಲಿ ಮುಂಚೂಣಿಯಲ್ಲಿದೆ.
ವಿರೋಧ ಪಕ್ಷವಾದ ಕಾಂಗ್ರೆಸ್ ಚುನಾವಣಾ ಸಿದ್ದತೆಯಲ್ಲಿ ಮುಂಚೂಣಿಯಲ್ಲಿರಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಲೋಪದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದು, ಇದರೊಟ್ಟಿಗೆ ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ಆಯ್ಕೆ ಮಾಡುವಲ್ಲಿ ಮಾತ್ರ ನಿರತವಾಗಿದೆ. ಆದರೆ ಕ್ಷೇತ್ರ ಮಟ್ಟದಲ್ಲಿ ಭೂತ್ ಮಟ್ಟದಲ್ಲಿ ಪಕ್ಷವನ್ನ ಗಟ್ಟಿಗೊಳಿಸುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ. ಈ ಬಾರಿ ಕಾಂಗ್ರೆಸ್ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ವರ್ಷದ ಮುಂಚೆಯೇ ಟಿಕೇಟ್ ಖಚಿತಪಡಿಸಿ ನಾಯಕರುಗಳಿಗೆ ಗೆಲುವಿಗಾಗಿ ಸಿದ್ದತೆ ಮಾಡಿಕೊಳ್ಳಲು ಸೂಚನೆಯನ್ನ ನೀಡುತ್ತದೆ ಎನ್ನಲಾಗಿತ್ತು.
ಆದರೆ ಇನ್ನು ಕೂಡ ಯಾರಿಗೆ ಟಿಕೇಟ್ ಸಿಗಲಿದೆ ಎಂದು ಫೈನಲ್ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೊನೆಯ ಒಂದೆರಡು ದಿನದಲ್ಲಿ ಟಿಕೇಟ್ ಘೋಷಣೆ ಮಾಡುವ ನಡೆಯೇ ಹಲವು ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣ ಎನ್ನಲಾಗಿತ್ತು. ಈ ಬಾರಿಯೂ ಅದೇ ಸಂಪ್ರದಾಯಕ್ಕೆ ಕಾಂಗ್ರೆಸ್ ಮುಂದಾಗಲಿದೆ ಎನ್ನಲಾಗಿದ್ದು ಮತ್ತೆ ಇದು ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಜೆಡಿಎಸ್ ಪಕ್ಷ ಗಟ್ಟಿಯಾಗಿರುವ ಬೆಂಗಳೂರು ಮೈಸೂರು ಭಾಗದಲ್ಲಿ ಮಾತ್ರ ಚುನಾವಣೆ ಹಿನ್ನಲೆಯಲ್ಲಿ ಸಂಘಟನೆಗೆ ಮುಂದಾಗಿದ್ದು ಉಳಿದ ಜಿಲ್ಲೆಯತ್ತ ತಲೆಯೂ ಎತ್ತಿಲ್ಲ. ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ಬಿಜೆಪಿ ಒಂದು ಹೆಜ್ಜೆ ಮುಂದೆ ಎಂಬಂತೆ ವರ್ಷದ ಮುಂಚೆಯೇ ಸಿದ್ದತೆಗೆ ಇಳಿದಿದ್ದು ಇದು ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಬಿಜೆಪಿಗೆ ಫ್ಲಸ್ ಆಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.