ಭಟ್ಕಳ: ಆರೋಗ್ಯ ಇಲಾಖೆಗೆ ಜನರ ಆರೋಗ್ಯವನ್ನು ಕಾಪಾಡಿ ಸೇವೆ ಸಲ್ಲಿಸುವ ಜವಾಬ್ದಾರಿ ಇದ್ದು, ಜನರಿಗೆ ಇದರ ವ್ಯವಸ್ಥೆ ಸಮರ್ಪಕವಾಗಿ ಸಿಗಬೇಕಾಗಿದೆ. ಇನ್ನು ಮುಂದಿನ ದಿನಗಳಲ್ಲಿ ತಾಲೂಕು ಆಸ್ಪತ್ರೆಯ ವ್ಯವಸ್ಥೆಯ ಸುಧಾರಣೆಗೆ ಸರ್ಕಾರದ ಮಟ್ಟದ ಆಗಬೇಕಾದ ಕೆಲಸಕ್ಕೆ ನಾನು ಸಿದ್ಧನಿದ್ದೇನೆ ಎಂದು ಶಾಸಕ ಸುನಿಲ್ ನಾಯ್ಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಮತ್ತು ತಾಲ್ಲೂಕು ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ, ಇನ್ನು ಜನರು ಸಹ ತಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕು. ಚಿಕ್ಕದಾಗಿ ಅನಾರೋಗ್ಯದ ಸ್ಥಿತಿಗೆ ನಿಷ್ಕಾಳಜಿ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕಾದ ಕೆಲಸ ಮಾಡಬೇಕಿದೆ. ಇದೇ 15 ವರ್ಷದ ಹಿಂದೆ ಕಬಡ್ಡಿ ಪಂದ್ಯಾವಳಿ ಮುಗಿಸಿ ಬರುವ ವೇಳೆ ಅಪಘಾತವಾಗಿದ್ದಾಗ ಇದೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬಹಳಷ್ಟು ಸಮಯ ಕಾದಿದ್ದ ದಿನದಿಂದ ನೋಡಿದರೆ ಇಂದು ಬದಲಾದ ವ್ಯವಸ್ಥೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೇ ಸರಕಾರಿ ಆಸ್ಪತ್ರೆಯ ಅಭಿವೃದ್ಧಿಯನ್ನು ತಿಳಿಯಪಡಿಸುತ್ತದೆ ಎಂದರು.
ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತರು ಆರೋಗ್ಯದ ಕಾಳಜಿ, ಮಾಹಿತಿ, ಜಾಗೃತಿಯನ್ನು ಜನರಿಗೆ ನೀಡುತ್ತಿದ್ದಾರೆ, ಇದು ಶ್ಲಾಘನೀಯ.ಎಂದರು.
ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಮಾತನಾಡಿ, ಜನರಿಗೆ ಅವರ ಕಾಯಿಲೆಯ ಬಗ್ಗೆ ಕಾಳಜಿ, ಮಾಹಿತಿ ಅತ್ಯಗತ್ಯ. ಒಂದು ಮಾಹಿತಿಯ ಪ್ರಕಾರ ಆರೋಗ್ಯದ ವ್ಯವಸ್ಥೆಯಲ್ಲಿ ಸರಕಾರದಿಂದ ಪಡೆದುಕೊಳ್ಳಲು ಶ್ರೀಮಂತರು ಬಡವರಾಗುತ್ತಿದ್ದಾರೆ. ರಾಜ್ಯದ ಜನರ ಆರೋಗ್ಯದ ಕಾಳಜಿಯ ಹಿನ್ನೆಲೆ 175 ತಾಲ್ಲೂಕು ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಿ ಬೃಹತ್ ಆರೋಗ್ಯ ಮೇಳ ಆಯೋಜಿಸಲಾಗಿದೆ. ಸದ್ಯಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್‍ಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಾಂಕ್ರಾಮಿಕ ರೋಗಗಳ ತಡೆಗೆ ತಪಾಸಣೆ ಮೂಲ ಅವಶ್ಯಕ. ಆದರೆ ಈ ಹಿಂದೆ ಜನರಲ್ಲಿ ಆರೋಗ್ಯದ ಕಾಳಜಿ ಇಲ್ಲವಾಗಿದ್ದು ಎರಡು ವರ್ಷದ ಹಿಂದೆ ಜಗತ್ತನ್ನೆ ಆವರಿಸಿದ ಕೋವಿಡ್ ಸಾಂಕ್ರಾಮಿಕ ರೋಗ ಜನರಿಗೆ ರೋಗ ತಡೆಯ ಎಚ್ಚರಿಕೆ ನೀಡಿದಂತಾಗಿದೆ. ಇನ್ನು ಅಸಾಂಕ್ರಾಮಿಕ ರೋಗಗಳಾದ ಬಿ.ಪಿ., ಶುಗರ್, ಡಯಾಬೀಟಿಸ್ ಗಳಿರುವ ರೋಗಿಗಳು ಅತೀ ಹೆಚ್ಚಿನ ಜಾಗ್ರತಿ ಹೊಂದಿರಬೇಕಾಗಿರುತ್ತದೆ. ಇತ್ತೀಚಿನ ದಿನದಲ್ಲಿ ವ್ಯಕ್ತಿಗಳಲ್ಲಿ ಮಾನಸಿಕ ಒತ್ತಡದಿಂದ ಯುವ ಸಮೂಹ ತತ್ತರಿಸುತ್ತಿದೆ. ಇದರ ಹಿನ್ನೆಲೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ವೈದ್ಯರು ರೋಗಿಗಳಲ್ಲಿ ಮಾಡುತ್ತಿದ್ದಾರೆ. ಇನ್ನು ಕ್ಯಾನ್ಸರ್ ರೋಗವು ಸಹ ಮೊದಲ ಹಂತದಲ್ಲಿಯೇ ವೈದ್ಯರ ಸಂಪರ್ಕದಿಂದ ಚಿಕಿತ್ಸೆ ಪಡೆದುಕೊಳ್ಳಬೇಕಿದ್ದು, ಇಲ್ಲವಾದಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ತಹಶೀಲ್ದಾರದ ಡಾ.ಸುಮಂತ್, ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್ ಉಪಸ್ಥಿತರಿದ್ದರು.
ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಈ ಆರೋಗ್ಯ ಮೇಳದಲ್ಲಿ 14 ವಿಭಾಗದಲ್ಲಿ ವಿವಿಧ ರೀತಿಯ ತಪಾಸಣೆ ಹಾಗೂ ರಕ್ತಪರೀಕ್ಷೆ ಸಹಿತ ಇನ್ನಿತರ ಪರೀಕ್ಷೆಯನ್ನು ತಾಲೂಕಿನ ನಾನಾ ಕಡೆಗಳಿಂದ ಬಂದ 916 ಜನರು ತಪಾಸಣೆ ಮಾಡಿಸಿಕೊಂಡು ಸದುಪಯೋಗ ಪಡಿಸಿಕೊಂಡರು.