ಹೊನ್ನಾವರ: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಾಲೂಕಿನ ನಗರಬಸ್ತಿಕೇರಿ ಗ್ರಾಮ ಆಯ್ಕೆಯಾದ ಹಿನ್ನಲೆಯಲ್ಲಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ಅಭಿವೃದ್ಧಿ ಉಪಕಾರ್ಯದರ್ಶಿ ಪಿ.ಎಂ.ಜಕ್ಕಪ್ಪಗೋಳ್ ಮಾತನಾಡಿ, ಪ್ರತಿ ಇಲಾಖೆಯವರು ಸೇರಿಕೊಂಡು ಸಂಸದರ ಆದರ್ಶ ಗ್ರಾಮ ಯೋಜನೆಯ ಕಾರ್ಯಕ್ರಮದ ಮೂಲಕ ಗ್ರಾಮದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಿಕ್ಷಣ ಇಲಾಖೆಯಲ್ಲಿ ಚರ್ಚೆಯಲ್ಲಿ ಗ್ರಾಮದ 13 ಶಾಲೆಯಲ್ಲಿ 7 ಶಾಲೆಯಲ್ಲಿ ಕಂಪೌಂಡ್ ಇಲ್ಲ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹೆಗಡೆ ಮಾಹಿತಿ ನೀಡಿದಾಗ, ನರೇಗಾ ಯೋಜನೆಯಲ್ಲಿ ಅನುಷ್ಠಾನ ಮಾಡಲು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಉಪಕಾರ್ಯದರ್ಶಿ ಪಿ.ಎಂ.ಜಕ್ಕಪ್ಪಗೋಳ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದ ಶಿಥಿಲಾವಸ್ಥೆಯ ಶಾಲೆಯನ್ನು ಗುರುತಿಸಿ ದುರಸ್ತಿ ಮಾಡಲು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದಾಗ ಎರಡು ತಿಂಗಳೊಳಗೆ ಆ ಕಾರ್ಯ ಮುಕ್ತಾಯ ಮಾಡಲು ಸೂಚಿಸಿದರು. ಹಾಡಗೇರಿಯಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು ಒರ್ವ ಶಿಕ್ಷಕರು ಇದ್ದಾರೆ. ಅತಿಥಿ ಶಿಕ್ಷಕರ ನಿಯೋಜನೆ ಅಗಸ್ಟನಲ್ಲಿ ಮಾಡುವುದರಿಂದ ಆರಂಭದ ಎರಡು ತಿಂಗಳು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಗ್ರಾ.ಪಂ.ಅಧ್ಯಕ್ಷ ಮಂಜುನಾಥ ನಾಯ್ಕ ಸಭೆಯ ಗಮನಕ್ಕೆ ತಂದಾಗ ಮುಂದಿನ ವರ್ಷದಿಂದ ಆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ನಗರಬಸ್ತಿಕೇರಿ ಗ್ರಾಮದಿಂದ 42 ಪಡಿತರ ಅರ್ಜಿಗಳು ಬಂದಿದ್ದು, ಇಲಾಖೆ ಪರಿಶೀಲನೆ ನಡೆಸಿ ನೂತನ ಪಡಿತರ ಚೀಟಿ ನೀಡುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮದ ವಿಧವಾ ವೇತನ, ವೃದ್ದಾಪ್ಯ ವೇತನ, ಅಂಗವಿಕಲ ವೇತನದ ಬಾಕಿ ಬಗ್ಗೆ ಸರ್ವೆ ನಡೆಸಿದ್ದು, ಪ್ರತಿಯೊಂದು ಅರ್ಹ ಫಲಾನುಭವಿಗೂ ಈ ಸೌಲಭ್ಯ ದೊರೆಯುವಂತೆ ಕಂದಾಯ ಇಲಾಖೆ ಮಾಡಲಿದೆ ಎಂದು ತಹಶೀಲ್ದಾರ ನಾಗರಾಜ ನಾಯ್ಕಡ್ ಮಾಹಿತಿ ನೀಡಿದರು. ರೈತರು ಹೆಚ್ಚಿನ ಪ್ರಮಾಣದ ಗದ್ದೆ ಮಾಡುತ್ತಿದ್ದು, ಬೆಳೆ ರಕ್ಷಣೆಗೆ ಇಲಾಖೆ ಮುಂದಾಗಲು ಕೃಷಿ ಇಲಾಖೆಯಿಂದ ನೀಡುವ 5 ತಾಡಪತ್ರೆ ಸಾಕಾಗುವುದಿಲ್ಲ ಸಂಖ್ಯೆ ಹೆಚ್ಚಿಸಿ ರೈತರಿಗೆ ಅನೂಕೂಲ ಮಾಡುವಂತೆ ಮನವಿ ಮಾಡಿದರು.
ತೋಟಗಾರಿಕೆ, ಮೀನುಗಾರಿಕೆ, ಪಶು ಇಲಾಖೆ, ಆರೋಗ್ಯ, ಸಮಾಜ ಕಲ್ಯಾಣ,ಹಿಂದುಳಿದ ವರ್ಗ, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಮಾಹಿತಿ ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಿದರು.
ನಗರಬಸ್ತಿಕೇರಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಆದರ್ಶ ಗ್ರಾಮ ಯೋಜನೆ ಸಂಸದ ಅನಂತಕುಮಾರ ಹೆಗಡೆಯವರು ನಮ್ಮ ಗ್ರಾಮ ಆಯ್ಕೆ ಮಾಡಿಕೊಂಡಿರುವುದು ಸಂತಸ ಮೂಡಿಸಿದೆ. ಅಧಿಕಾರಿಗಳು ನಮ್ಮ ಗ್ರಾಮಸ್ಥರಿಗೆ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ನೀಡುವ ಮೂಲಕ ಗ್ರಾಮ ಅಭಿವೃದ್ದಿಗೆ ಕೈ ಜೋಡಿಸಿ ಯೋಜನೆಯ ಯಶ್ವಸಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾ. ಪಂ.ಅಧ್ಯಕ್ಷ ಮಂಜುನಾಥ ನಾಯ್ಕ, ಉಪಾಧ್ಯಕ್ಷೆ ಜಯಂತಿ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.