ಕಾರವಾರ: ಕೈಗಾ ಎನ್‍ಪಿಸಿಐಎಲ್‍ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಸಂಘಟನೆ ಮತ್ತು ಕೈಗಾ ಆಡಳಿತ ಮಂಡಳಿ ಏ.21ರಂದು ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವಾರು ಸಮಯದಿಂದ ನೆನೆಗುದಿಗೆ ಬಿದ್ದಿರುವ ಹಲವಾರು ಕಾರ್ಮಿಕ ವಿವಾದಗಳನ್ನು ಬಗೆಹರಿಸಲಾಗುವುದು ಎಂದು ಕೈಗಾ ಗುತ್ತಿಗೆ ಕಾರ್ಮಿಕರ ಯೂನಿಯನ್ ಅಧ್ಯಕ್ಷ, ಮಾಜಿ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಕೈಗಾ ಎನ್‍ಪಿಸಿಐಎಲ್‍ನಲ್ಲಿ ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ದಿನನಿತ್ಯ ದುಡಿಯುತ್ತಿದ್ದಾರೆ. ಇವರಿಗೆ ಕೇಂದ್ರ ಸರಕಾರ, ಕಾರ್ಮಿಕ ಇಲಾಖೆ ಕನಿಷ್ಟ ವೇತನ ನಿಗದಿ ಮಾಡಿದ್ದು, ಈ ಹಿಂದೆ ಕೈಗಾ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಲ್ಲಿ ತಾರತಮ್ಯ ಮಾಡಿ ವಿವಿಧ ರೀತಿಯಲ್ಲಿ ಸತಾಯಿಸುತ್ತಿದ್ದರು. ಆ ಸಮಯದಲ್ಲಿ ನಾವು ಸ್ಥಳೀಯ ಜನರ ಸಹಾಯದಿಂದ ಮಲ್ಲಾಪುರದಲ್ಲಿ ರಸ್ತೆ ತಡೆ ಮುಂತಾದ ಹೋರಾಟಗಳನ್ನು ನಡೆಸಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಆಡಳಿತ ಮಂಡಳಿ ಸಹಾಯದೊಡನೆ ಈಡೇರಿಸಿದ್ದೇವೆ. ತದನಂತರ ಕಾರ್ಮಿಕರಿಗೆ ಯಾವುದೇ ರೀತಿಯ ಅನ್ಯಾಯ ಆಗಬಾರದು ಎಂದು ಕೈಗಾ ಗುತ್ತಿಗೆ ಕಾರ್ಮಿಕರ ಯೂನಿಯನ್ ರಚಿಸಿ ಅದನ್ನು ಹುಬ್ಬಳ್ಳಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರಿಂದ ಕಾರ್ಮಿಕ ಕಾಯಿದೆಯಂತೆ ನೋಂದಾವಣೆ ಮಾಡಲಾಗಿದ್ದು, ನಾನು ಈ ಯೂನಿಯನ್ ಅಧ್ಯಕ್ಷನಾಗಿದ್ದೇನೆ ಎಂದು ಸೈಲ್ ತಿಳಿಸಿದ್ದಾರೆ.
ಕೈಗಾದಲ್ಲಿ ಈಗಲೂ ಹಲವಾರು ಕಾರ್ಮಿಕ ವಿವಾದಗಳಿದ್ದು, ಇದನ್ನು ಆಡಳಿತ ಮಂಡಳಿಯೊಡನೆ ಸೌಹಾರ್ದಯುತವಾಗಿ ಬಗೆಹರಿಸುವ ಸಲುವಾಗಿ ಆಡಳಿತ ಮಂಡಳಿ ಮತ್ತು ಗುತ್ತಿಗೆ ಕಾರ್ಮಿಕ ಸಂಘದಿಂದ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ಚಾಚೂ ತಪ್ಪದೇ ನೀಡುವುದು, ಭವಿಷ್ಯನಿಧಿ ಮತ್ತು ಇಎಸ್‍ಐ ತಪ್ಪದೆ ತುಂಬುವುದು, ಹೈಲಿ ಸ್ಕಿಲ್ಲ್ಡ್ ಕಾರ್ಮಿಕರನ್ನು ಕಡಿಮೆ ದರ್ಜೆ ಶ್ರೇಣಿಯಲ್ಲಿ ದುಡಿಸುವುದು, ರೇಡಿಯೇಷನ್ ವಿಶೇಷ ಭತ್ಯೆ ನೀಡುವುದು, ಓವರ್ ಟೈಮ್ ಇದ್ದಲ್ಲಿ ಕಾನೂನು ಪ್ರಕಾರ ಭತ್ಯೆ ನೀಡುವುದು, ಡ್ರೈವರ್ ಮತ್ತು ಸೆಕ್ಯೂರಿಟಿಗಳಿಗೆ ಅವರವರ ಶ್ರೇಣಿಗೆ ತಕ್ಕಂತೆ ವೇತನ ನೀಡುವುದು ಮುಂತಾದ ವಿಷಯಗಳ ಬಗ್ಗೆ ನಿರ್ಧಾರಕ್ಕೆ ಬರಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.