ಕಾರವಾರ: ಬೇಸಿಗೆ ಸಮಯದಲ್ಲಿ ಕೆಲಸದ ಅಭಾವದಿಂದ ಕೂಲಿಕಾರರು ಸಂಕಷ್ಟದ ದಿನಗಳನ್ನ ಕಳೆಯುತ್ತಿರುತ್ತಾರೆ. ಇದೇ ಕಾರಣಕ್ಕಾಗಿ ಅಸಂಘಟಿತ ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯೋಣ ಬಾ ಅಭಿಯಾನದಡಿ ಕೆಲಸ ನೀಡಲಾಗುತ್ತಿದೆ.
ಮುಂಡಗೋಡ ತಾಲೂಕಿನ ಮಳಗಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ಸುಮಾರು 34 ಕೂಲಿಕಾರರ ಸೇರಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಈ ಕೆಲಸದಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅದರಲ್ಲೂ ವಿಶೇಷವಾಗಿ 60 ವರ್ಷ ಮೇಲ್ಪಟ್ಟವರು 7 ಜನ, ಹಾಗೂ 5 ವಿಧವೆಯರು, ಇಬ್ಬರು ವಿಕಲಚೇತನರು ಕೆಲಸದಲ್ಲಿ ತೊಡಗಿದ್ದಾರೆ.
ನರೇಗಾ ಯೋಜನೆಯಡಿ ಸುಮಾರು ಎರಡು ಕೀ. ಮೀ ವ್ಯಾಪ್ತಿಯಲ್ಲಿ 1ಮೀ ಅಗಲ ಹಾಗೂ 1ಮೀ ಆಳ ಅಳತೆಯಲ್ಲಿ ಕಾಲುವೆ ನಿರ್ಮಿಸಲಾಗುತ್ತಿದೆ. ಸುಮಾರು 3ಲಕ್ಷ ವೆಚ್ಚದಲ್ಲಿ ಕಳೆದ 24 ದಿನದಿಂದ ನಡೆಯುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಇವರೆಗೆ ಅಂದಾಜು 850 ಮಾನವದಿನಗಳನ್ನು ಸೃಜಿಸಲಾಗಿದೆ.
ಕಾಲುವೆ ನಿರ್ಮಾಣ ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಪ್ರತಿ ಮಳೆಗಾಲದಲ್ಲಿಯೂ ಸುತ್ತಲಿನ ಹೊಲದಲ್ಲಿ ನೀರು ತುಂಬಿ ಬೆಳೆಹಾನಿಯಾಗುತ್ತಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ಡರ್ ತಿಳಿಸಿದ್ದಾರೆ.
ಕೃಷಿ ಹಾಗೂ ಅರಣ್ಯ ಇಲಾಖೆ ತಾಂತ್ರಿಕ ಸಹಾಯಕ ಎಂಜಿನಿಯರ್ ಬಸವರಾಜ ಪಾಟೀಲ ಹೇಳುವಂತೆ, ಮಳೆಗಾಲ ಸಮೀಪಿಸುತ್ತಿರುವುದರಿಂದ ಎಪ್ರಿಲ್ ಮೇ ಜೂನ್ ತಿಂಗಳಲ್ಲಿ ಕಾಲುವೆ ನಿರ್ಮಾಣ, ಟ್ರೆಂಚ್, ಕೆರೆ ನಿರ್ಮಾಣ ಕಾಮಗಾರಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುತ್ತದೆ. ಇಲ್ಲಿನ ಕೂಲಿಕಾರರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಮುಂದಾಗುತ್ತಾರೆ ಎನ್ನುತ್ತಾರೆ.
ತಾಲೂಕು ಪಂಚಾಯತ್ ಐಇಸಿ ಸಂಯೋಜಕರು ಇತರರು ಇದ್ದರು.