ಯಲ್ಲಾಪುರ: ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ರಾಮಾಪುರ ಬಳಿ ನಡೆದಿದೆ.
ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಇವರ ಆಕಳನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಕಾಡಿನಲ್ಲಿ ಯಾರೋ ದುಷ್ಕರ್ಮಿಗಳು ಹಾರಿಸಿದ ಗುಂಡೇಟು ಆಕಳಿಗೆ ತಗುಲಿದ್ದು, ಆಕಳು ಗಾಯಗೊಂಡಿದೆ. ರಕ್ತ ಸುರಿಸುತ್ತಾ ಮರಳಿ ಬಂದಿದೆ. ಹೌಹಾರಿದ ಮನೆ ಜನ ರಕ್ತ ಸುರಿಸಿದ ದಾರಿಯಲ್ಲಿ ಹೋದಾಗ ಕಾಡಿನವೆರೆಗೆ ರಕ್ತ ಚೆಲ್ಲಿದ್ದು ಕಂಡು ಬಂದಿದೆ.
ತಕ್ಷಣ ಪುಶು ವೈದ್ಯಾಧಿಕಾರಿ ಡಾ. ಸುಬ್ರಾಯ ಭಟ್ಟ ಅವರನ್ನು ಕರೆಯಿಸಿ ಆಕಳಿಗೆ ಚಿಕಿತ್ಸೆ ನೀಡಲಾಗಿದೆ. ನಂತರ ಆಕಳು ತುಸು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಆಕಳಿನ ಮಾಲಕರು ತಿಳಿಸಿದ್ದಾರೆ.
ಈ ಭಾಗದಲ್ಲಿ ಜಾನುವಾರುಗಳು ಕಾಣೆಯಾಗುವುದು ಸಾಮಾನ್ಯವಾಗಿತ್ತು. ಕಾಡಿನಲ್ಲಿ ಬಿಟ್ಟ ಜಾನುವಾರುಗಳನ್ನು ಯಾರೋ ಕದ್ದೊಯ್ದರೋ, ಅಥವಾ ಕಾಡು ಪ್ರಾಣಿ ಹೊತ್ತೊಯ್ದಿತ್ತೊ ಎಂದು ಅಂದುಕೊಂಡು ಸುಮ್ಮನಾಗುತ್ತಿದ್ದೆವು. ಆದರೆ ಈಗ ಆಕಳಿಗೆ ಗುಂಡೇಟು ತಗುಲಿದ್ದು, ಚಿಂತೆಗೀಡು ಮಾಡಿದೆ ಎನ್ನುತ್ತಾರೆ ಪಾಂಡುರಂಗ ಪಂಡರಾಪುರ.
ಆಕಳಿಗೆ ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಸುಬ್ರಾಯ ಭಟ್ಟ, ಮೇಲ್ನೋಟಕ್ಕೆ ಗುಂಡೇಟು ತಗುಲಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆಕಳಿಗೆ ಗಾಯವಾಗಿದ್ದು, ಅಲ್ಲಿ ಗುಂಡಿನಂತಹ ಮೆಟಲ್ ನ ವಸ್ತು ಸಿಲುಕಿಕೊಂಡಿರಬಹುದೆಂದು ಅನಿಸುತ್ತದೆ. ಮೆಟಲ್ ಡಿಟೆಕ್ಟರ್ ನಲ್ಲಿ ಯಾವುದೋ ಮೆಟಲ್ ನ ವಸ್ತು ಒಳಗಡೆ ಇರುವುದು ತಿಳಿಯುತ್ತಿದೆ. ತನಿಖೆ ನಡೆಸುವುದಾದರೆ. ತನಿಖಾಧಿಕಾರಿಗಳ ಮುಂದೆ ಶಸ್ತ್ರ ಚಿಕಿತ್ಸೆ ನಡೆಸಿ ಮೆಟಲ್ ಅನ್ನು ಹೊರ ತೆಗೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.