ಸಿದ್ದಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ರಸ್ತೆ ನಿರ್ಮಾಣ ಅಸಮರ್ಪಕ ಆಗಿದ್ದು, ಹಣಬಲ ಹೊಂದಿರುವವರ ಜೊತೆ ಶಾಮೀಲಾಗಿ ರಸ್ತೆಯನ್ನು ನ್ಯಾಯ ಸಮ್ಮತವಾಗಿ ನಿರ್ಮಿಸಿರುವುದಿಲ್ಲ ಎಂದು ಜೆಡಿಎಸ್ ಮುಖಂಡ ಮುಖಂಡ ಇಲಿಯಾಸ ಇಬ್ರಾಹಿಂ ಸಾಬ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ವಿಧಾನಸಭಾಧ್ಯಕ್ಷರ ಕ್ಷೇತ್ರ ಸಿದ್ದಾಪುರದ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಕೈಗೊಂಡಿದೆ. ಪಟ್ಟಣದ ನೆಹರೂ ಮೈದಾನದಿಂದ ಜೋಗ ರಸ್ತೆಯ ಉರ್ದು ಶಾಲೆಯವರೆಗೆ ನಿರ್ಮಾಣಗೊಂಡು ಉತ್ತಮ ಚತುಷ್ಪಥರಸ್ತೆಯು ಕಳಪೆ ಕಾಮಗಾರಿಯಾಗಿದೆ. ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ.ಚತುಷ್ಪಥ ಮಾರ್ಗದ ಎರಡು ಕಡೆಗಳಲ್ಲಿ ರಸ್ತೆ ನಿರ್ಮಾಣ ಅಸಮರ್ಪಕವಾಗಿದೆ. ಹಣಬಲ ಹೊಂದಿರುವವರ ಜೊತೆ ಶಾಮೀಲಾಗಿ ರಸ್ತೆಯನ್ನು ನ್ಯಾಯ ಸಮ್ಮತವಾಗಿ ನಿರ್ಮಿಸಿರುವುದಿಲ್ಲ. ಚಂದ್ರಗುತ್ತಿ (ತಿಮ್ಮಪ್ಪ ನಾಯಕ) ಸರ್ಕಲ್‍ದಿಂದ ಹೊಸ ಬಸ್‍ಸ್ಟ್ಯಾಂಡ್‍ಗೆ ಹೋಗುವ ಎಡಬದಿ ದಾರಿಯಲ್ಲಿ ಹಾಗೂ ಕೆಲಕಡೆ ಹೊಸ ಗಟಾರ್ ನಿರ್ಮಿಸದೇ ಅನ್ಯಾಯ ಮಾಡಲಾಗಿದೆ. ಜನೋಪಯೋಗಿ ಇಲಾಖೆ ಎನಿಸಿಕೊಳ್ಳಬೇಕಾದ ಲೋಕೋಪಯೋಗಿಯ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯವಹಿಸಿ ಗುತ್ತಿಗೆದಾರರ ಪರವಾಗಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಸೂಕ್ತ ಪುಟ್‍ಪಾತ್ ವ್ಯವಸ್ಥೆ ಕೂಡಾ ಇಲ್ಲ. ಅಳವಡಿಸಿರುವ ವಿದ್ಯುತ್ ದೀಪ ಕಂಬಗಳಿಗೂ ಜೀವವಿಲ್ಲ. ಕೋಟ್ಯಾಂತರ ಹಣ ವ್ಯಯಿಸಿರುವ ಈ ಕಾಮಗಾರಿಯಲ್ಲಿ ಗೋಲ್‍ಮಾಲ್ ಆಗಿರುವ ಶಂಕೆ ವ್ಯಕ್ತಪಡಿಸಿರುವ ಇಲಿಯಾಸ ಜನರ ಹಣ ದುರುಪಯೋಗವಾಗುತ್ತಿದ್ದು, ಇದರ ಕೂಲಂಕುಷ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.