ಹೊನ್ನಾವರ: ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಹಂದಿಗದ್ದೆಯ ಬಳಿ 30 ಲಕ್ಷ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಶಾಸಕನಾದ ಬಳಿಕ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ. ಬಿಜೆಪಿ ಸರ್ಕಾರ ಅವಧಿಯಲ್ಲಿಯೇ 4 ಕೋಟಿ ವೆಚ್ಚದ ಫೂಟ್ ಬ್ರಿಜ್ ನಿರ್ಮಾಣವಾಗಿದೆ. ಸಾಲ್ಕೋಡ್ ಗ್ರಾಮದಲ್ಲಿಯೇ ಹೆಚ್ಚಿನ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆ ಸಮೀಪದಲ್ಲಿ ಇದರ ಹೊರತಾಗಿ ಮತ್ತೆ ಮೂರು ಸೇತುವೆಯಲ್ಲಿ ಎರಡು ಸೇತುವೆ ಈಗಾಗಲೇ ನಿರ್ಮಾಣವಾಗಿದೆ. ಸಾಲ್ಕೋಡ್ ಹೊಳೆಗೆ 1 ಕೋಟಿ ವೆಚ್ಚದ ಸೇತುವೆ ನಿರ್ಮಾಣವಾಗಿದ್ದು, ಮುಂದುವರೆದ ಕಾಮಗಾರಿ ಕೆಲವೇ ದಿನದಲ್ಲಿ ಆರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಲ್ಲದೇ ಪಟ್ಟಣದ 6 ಕೋಟಿ ವೆಚ್ಚದ ಬಸ್ ನಿಲ್ದಾಣ ಹಾಗೂ 8 ಕೋಟಿ ವೆಚ್ಚದ ಪದವಿ ಕಾಲೇಜಿನ ಉದ್ಘಾಟನೆಗೆ ಸಿದ್ಧವಾಗಿದೆ. ಇದರ ಹೊರತಾಗಿ ಕ್ಷೇತ್ರದ ವಿವಿಧಡೆ ಗ್ರಾಮೀಣ ಭಾಗದ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸಚೀನ ನಾಯ್ಕ, ಸದಸ್ಯರಾದ ಬಾಲಚಂದ್ರ ನಾಯ್ಕ, ಗಣಪತಿ ಭಟ್, ಕಡ್ಲೆ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಮಾಜಿ ಜಿ.ಪಂ.ಸದಸ್ಯ ಸುಬ್ರಹ್ಮಣ್ಯ ಶಾಸ್ತಿ, ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ಆರ್.ಎಂ.ಹೆಗಡೆ, ಎನ್.ಎಸ್.ಹೆಗಡೆ, ವಿಶ್ವನಾಥ ಹೆಗಡೆ, ಎಂ.ಎಸ್.ಹೆಗಡೆ, ಗ್ರಾಮಸ್ಥರಾದ ಸುಬ್ರಾಯ ಶೆಟ್ಟಿ, ಗಣಪತಿ ನಾಯ್ಕ, ಉಮೇಶ ನಾಯ್ಕ, ರಮೇಶ ಶೆಟ್ಟಿ, ಗುತ್ತಿಗೆದಾರ ರಾಘು ನಾಯ್ಕ, ಲೊಕೋಪಯೋಗಿ ಅಧಿಕಾರಿಗಳಾದ ಯೋಗಾನಂದ, ಎಂ.ಎಸ್.ನಾಯ್ಕ, ಪಿಎಸೈ ಸಾವಿತ್ರಿ ನಾಯಕ, ಸ್ಥಳೀಯರು ಇದ್ದರು.
ಶರಾವತಿ ಕುಡಿಯುವ ನೀರಿನ ಯೋಜನೆ ಕುರಿತು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿಕೆಗೆ ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಅವರನ್ನು ಮತ್ತೆ ಕೆಣಕಿದ್ದಾರೆ.
ಶರಾವತಿ ಕುಡಿಯುವ ನೀರಿನ ಯೋಜನೆಯನ್ನು ನಾನು ತಂದಿದ್ದು ಎಂದು ಹೇಳಲಿಲ್ಲ. ಹಿಂದಿನ ಸರ್ಕಾರ ಟೆಂಡರ್ ಮಾಡದೇ ಶಂಕುಸ್ಥಾಪನೆ ಮಾಡಿತ್ತು. ಚುನಾವಣಾ ಪೂರ್ವದಲ್ಲಿ ಆರು ತಿಂಗಳು ಅಥವಾ ಒಂದು ವರ್ಷ ಇರುವಾಗ ವಿವಿಧ ಯೋಜನೆ ಘೋಷಣೆ ಮಾಡಿ ಶಂಕುಸ್ಥಾಪನೆ ಮಾಡಿದರೆ ಕೆಲಸ ಆಗುವುದಿಲ್ಲ. ಆ ಯೋಜನೆಗೆ ಟೆಂಡರ್ ಮಾಡಿದರೆ ಮಾತ್ರ ಅನುಷ್ಠಾನವಾಗಲಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಟೆಂಡರ್ ಆದ ಬಳಿಕ ನನ್ನ ಅವಧಿಯಲ್ಲಿ ಕೆಲಸ ಆರಂಭವಾಗಿದೆ. ಪ್ರಥಮವಾಗಿ 65 ಕೋಟಿ ಮಂಜೂರು ಮಾಡಲು ವಿಧಾನಸಭೆಯಲ್ಲಿ ಪ್ರಶ್ನಿಸಿ ಯೋಜನೆಗೆ ಹಣ ಮಂಜೂರಿಯ ದಾಖಲೆ ನನ್ನ ಬಳಿಯು ಇದೆ ಎಂದು ಶಾರದಾ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ತ್ವರಿತವಾಗಿ ಕಾಮಗಾರಿ ನಡೆಸಲು ಜಾಕ್ವಲ್ ಬಳಿ ಟ್ಯಾಂಕರ್ ನಿರ್ಮಾಣ ನಡೆಯುತ್ತಿದೆ. ಪೈಪ್ ಲೈನ್ ಅಳವಡಿಕೆ ಗ್ರಾಮೀಣ ಭಾಗದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಯಾರು ಏನೆ ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನತೆ ಈ ಸ್ಥಾನಕ್ಕೆ ನನ್ನ ಆಯ್ಕೆ ಮಾಡಿದ್ದಾರೆ. ಕೆಲಸ ಮಾಡುವುದು ನನ್ನ ಕರ್ತವ್ಯ ಆ ಕಾರ್ಯ ಮಾಡುತ್ತಿದ್ದೇನೆ ಎಂದರು.