ಶಿರಸಿ: ರಾಜ್ಯ ವಿದಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಬದಲಾವಣೆಗಳು ಹೆಚ್ಚಾಗುತ್ತಿದೆ. ಈ ನಡುವೆ ಜಿಲ್ಲೆಯ ರಾಜಕೀಯ ಕೇಂದ್ರ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ ಎನ್ನಲಾಗಿದ್ದು ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೊಮ್ಮಗ ಶಶಿಭೂಷಣ ಹೆಗಡೆಯವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅಭ್ಯರ್ಥಿ ಮಾಡಲು ತೆರೆಮರೆಯ ಪ್ರಯತ್ನ ಪ್ರಾರಂಭವಾಗಿದೆ ಎನ್ನಲಾಗಿದೆ.
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೇಟ್ ಸಿಗಲಿದೆಯೇ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಕಾಡತೊಡಗಿದೆ. ಮುಖ್ಯವಾಗಿ ಟಿಕೇಟ್ ಆಕಾಂಕ್ಷಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುಷ್ಮ ರಾಜಗೋಪಾಲ, ನಿವೇದಿತ್ ಆಳ್ವಾ ಪ್ರಮುಖವಾಗಿ ಕೇಳಿ ಬಂದಿದೆ. ಇದಲ್ಲದೇ ದೀಪಕ್ ದೊಡ್ಡುರು, ರಮೇಶ್ ದುಬಾಶಿ ಸೇರಿದಂತೆ ಹಲವರ ಹೆಸರು ಸಹ ಕೇಳಿ ಬಂದಿದೆ.
ಈ ನಡುವೆ ಬಿಜೆಪಿ ಪ್ರಬಲ ಕ್ಷೇತ್ರವಾಗಿರುವ ಶಿರಸಿ ಕ್ಷೇತ್ರದಿಂದ ಕಾಂಗ್ರೆಸ್ ಹೇಗಾದರು ಗೆಲ್ಲಲೇ ಬೇಕು ಎಂದು ಬ್ರಾಹ್ಮಣ(ಹವ್ಯಕ) ಸಮುದಾಯದ ಅಭ್ಯರ್ಥಿಯನ್ನೇ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ದ ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎನ್ನುವ ಚಿಂತನೆಯನ್ನ ಕೆಲ ನಾಯಕರು ನಡೆಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿರುವ ಶಶಿಭೂಷಣ್ ಹೆಗಡೆಯನ್ನ ಕಾಂಗ್ರೆಸ್ ಪಕ್ಷಕ್ಕೆ ತಂದು ಟಿಕೇಟ್ ಕೊಡಲು ತೆರೆ ಮರೆಯ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಸದ್ಯ ಟಿಕೇಟ್ ಆಕಾಂಕ್ಷಿಗಳಾಗಿರುವ ಭೀಮಣ್ಣ ನಾಯ್ಕ ಸತತ ಸೋಲಿನಿಂದ ಇನ್ನು ಚುನಾವಣೆಗೆ ಸ್ಪರ್ಧಿಸಬೇಕೇ ಇಲ್ಲವೇ ಎನ್ನುವ ಚಿಂತನೆಯಲ್ಲಿ ಇದ್ದಾರೆ. ಪರಿಷತ್ ಚುನಾವಣೆಯ ಪೆಟ್ಟು ವಿಧಾನ ಸಭಾ ಚುನಾವಣೆಯ ಟಿಕೇಟ್ ಮೇಲೆ ಭೀಮಣ್ಣರಿಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಮತ್ತೋರ್ವ ಆಕಾಂಕ್ಷಿ ಸುಷ್ಮ ರಾಜಗೋಪಾಲ ಕ್ಷೇತ್ರಕ್ಕೆ ಹೊಸಬರು ಎಂದು ಅವರ ವಿರೋಧಿ ಬಣ ಹಬ್ಬಿಸತೊಡಗಿದೆ. ಅಲ್ಲದೇ ಈಗಾಗಲೇ ಎರಡು ಗುಂಪುಗಳಾದಂತಾಗಿದ್ದು ಸುಷ್ಮಾರಿಗೆ ಟಿಕೇಟ್ ಕೊಟ್ಟರೇ ಇನ್ನೊಂದು ಗುಂಪು ವಿರೋಧ ಮಾಡುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಇನ್ನು ಮತ್ತೊರ್ವ ಅಭ್ಯರ್ಥಿ ನಿವೇದಿತ್ ಆಳ್ವಾ ಪ್ರತಿ ಭಾರಿ ಚುನಾವಣೆಯಲ್ಲಿ ಟಿಕೇಟ್ ಪಟ್ಟಿಯಲ್ಲಿ ಹೆಸರು ಕೇಳಿ ಬರುತ್ತದೆ. ಆದರೆ ಅಂತಿಮವಾಗಿ ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಿಲ್ಲ. ಈ ವರೆಗೆ ಯಾವುದೇ ಚುನಾವಣೆ ಎದುರಿಸದೇ ಇರುವುದು ಮತ್ತೊಂದು ಹಿನ್ನಡೆಯಾಗಿದ್ದು ನಿವೇದಿತ್ ಆಳ್ವಾಗೆ ಟಿಕೇಟ್ ಕೊಟ್ಟರು ಉಳಿದವರು ವಿರೋಧ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶಶಿಭೂಷಣ್ ತರುವ ಯತ್ನ ನಡೆದಿದೆ ಎನ್ನಲಾಗಿದೆ.
ಕ್ಷೇತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು ಇಡೀ ಕ್ಷೇತ್ರದ ಅನುಭವ, ಜನಗಳ ಜೊತೆ ಹೊಂದಾಣಿಕೆ, ಬ್ರಾಹ್ಮಣ ಸಮುದಾಯ, ರಾಮಕೃಷ್ಣ ಹೆಗಡೆ ಮೊಮ್ಮಗ, ಎಲ್ಲಾ ನಾಯಕರ ಜೊತೆ ಉತ್ತಮ ಸಂಬಂಧ ಹೀಗೆ ಹಲವು ಧನಾತ್ಮಕ ಅಂಶಗಳು ಶಶಿಭೂಷಣ್ ಹೆಗಡೆ ಪರ ಇದ್ದು ಕಾಂಗ್ರೆಸ್ ಪಕ್ಷಕ್ಕೆ ಅವರನ್ನ ತಂದು ಟಿಕೇಟ್ ಕೊಟ್ಟು ಗೆಲ್ಲಿಸುವ ಮೂಲಕ ಕ್ಷೇತ್ರವನ್ನ ಕಾಂಗ್ರೆಸ್ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎನ್ನುವ ಚಿಂತನೆ ಕೆಲ ನಾಯಕರದ್ದು ಎನ್ನಲಾಗಿದೆ.
ಕುಟುಂಬದ ಜೊತೆ ದೇಶಪಾಂಡೆ ಒಡನಾಟ; ಶಶಿಭೂಷಣ್ ಹೆಗಡೆಯವರ ಕುಟುಂಬದ ಜೊತೆ ಇಂದಿಗೂ ಜಿಲ್ಲಾ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಮಾಜಿ ಸಚಿವ ಆರ್ ವಿ ದೇಶಪಾಂಡೆ ಒಡನಾಟವನ್ನ ಹೊಂದಿದ್ದಾರೆ.
ಶಶಿಭೂಷಣ್ ಹೆಗಡೆಯವರ ಅಜ್ಜ ರಾಮಕೃಷ್ಣ ಹೆಗಡೆ ದೇಶಪಾಂಡೆಯವರ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ಇಂದಿಗೂ ದೇಶಪಾಂಡೆಯವರಿಗೆ ರಾಮಕೃಷ್ಣ ಹೆಗಡೆಯವರ ಬಗ್ಗೆ ಅಪಾರ ಗೌರವವಿದೆ. ಈ ನಿಟ್ಟಿನಲ್ಲಿ ಅವರ ಮೊಮ್ಮಗ ಶಶಿಭೂಷಣ್ ಹೆಗಡೆಯನ್ನ ಪಕ್ಷಕ್ಕೆ ಬಂದರು ದೇಶಪಾಂಡೆಯವರ ವಿರೋಧವಿಲ್ಲ ಎನ್ನಲಾಗಿದೆ.
ಅಲ್ಲದೇ ಅವರ ಸಹಕಾರದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಬಂದು ಟಿಕೇಟ್ ಪಡೆಯುವ ಸಾಧ್ಯತೆ ಇದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬ್ರಾಹ್ಮಣ ಮತವನ್ನ ಸೆಳೆಯುವುದಕ್ಕೆ ದೇಶಪಾಂಡೆ ಶಶಿಭೂಷಣ್ ಹೆಗಡೆಗೆ ಪಕ್ಷಕ್ಕೆ ಕರೆತರಲು ಮನಸ್ಸನ್ನ ಸಹ ಮಾಡಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.