ಶಿರಸಿ: ಕಲೆ, ಸಂಸ್ಕೃತಿಯ ಕುರಿತು ಕೆಲಸ ಮಾಡುತ್ತಿರುವ ಸಿದ್ದಾಪುರದ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನವು ಅನಂತೋತ್ಸವವನ್ನು ಯಕ್ಷಗಾನ, ಪ್ರಶಸ್ತಿ ಪ್ರದಾನದ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಭಾಗವತ ಕೇಶವ ಹೆಗಡೆ ಕೊಳಗಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಅನಂತಶ್ರೀ ಪ್ರಶಸ್ತಿಯನ್ನು ಹಿರಿಯ ತ್ರಿಭಾಷಾ ವಿದ್ವಾಂಸ, ವಾಗ್ಮಿ, ಪ್ರವಚನಕಾರ, ಪ್ರಸಿದ್ಧ ಅರ್ಥದಾರಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಪ್ರದಾನ ಮಾಡಲಾಗುತ್ತದೆ. ಮೇರು ಕಲಾವಿದರಾಗಿದ್ದ ದಿ.ಅನಂತ ಹೆಗಡೆ ಅವರ ನೆನಪಿನಲ್ಲಿ ಹನ್ನೆರಡು ವರ್ಷಗಳ ಹಿಂದೆ ಸ್ಥಾಪಿಸಿದ ಅನಂತ ಪ್ರತಿಷ್ಠಾನವು ಅನಂತ ಹೆಗಡೆ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಸಾಧಕರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.
ಈ ಬಾರಿ ಮೂಲೆಮನೆ ದೇವಸ್ಥಾನ ಬಳಿಯ ವರ್ಗಾಸರ ಅಭಿನವ ರಂಗಮಂದಿರದಲ್ಲಿ ಏ.30ರಂದು ಸಂಜೆ 4.45ರಿಂದ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ನಡೆಯಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮದ ಸಹಭಾಗಿತ್ವ ನೀಡಿದೆ ಎಂದರು.
ಸುಚೀಂದ್ರಪ್ರಸಾದ, ಕಾಗೇರಿ ಭಾಗಿ;; ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಲಿದ್ದಾರೆ. ಕೆರೇಕೈ ಅವರಿಗೆ ಪ್ರಶಸ್ತಿ ಪ್ರದಾನವನ್ನು ಚಿತ್ರನಟ, ನಿರ್ದೇಶಕ ಸುಚೀಂದ್ರ ಪ್ರಸಾದ್ ನಡೆಸಲಿದ್ದಾರೆ. ಅಭಿನಂದನಾ ನುಡಿಯನ್ನು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ನಡೆಸಲಿದ್ದಾರೆ
.
ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಸೆಲ್ಕೋ ಇಂಡಿಯಾ ಸಿಇಓ ಮೋಹನ ಭಾಸ್ಕರ ಹೆಗಡೆ, ಟಿಎಂಎಸ್ ಸಿದ್ದಾಪುರ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ, ಶಂಕರಮಠದ ಅಧ್ಯಕ್ಷ ವಿಜಯ ಹೆಗಡೆ ದೊಡ್ಮನೆ, ಕಲಾ ಪೋಷಕ ಆರ್.ಜಿ.ಭಟ್ಟ ವರ್ಗಾಸರ, ಅಕಾಡೆಮಿ ಮಾಜಿ ಸದಸ್ಯ ವಿ.ದತ್ತಮೂರ್ತಿ ಭಟ್ಟ ಭಾಗವಹಿಸುವರು. ಅಧ್ಯಕ್ಷತೆಯನ್ನು ಅನಂತ ಪ್ರತಿಷ್ಠಾನ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ವಹಿಸಿಕೊಳ್ಳಲಿದ್ದಾರೆ.
ಯಕ್ಷಗಾನ ಸಂಭ್ರಮ: ಪ್ರಶಸ್ತಿ ಪ್ರದಾನದ ಬಳಿಕ ರಾಜ್ಯದ ಪ್ರಸಿದ್ದ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ್, ಪರಮೇಶ್ವರ ಭಂಡಾರಿ, ಸಂಪ ಲಕ್ಷ್ಮೀನಾರಾಯಣ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ವಿನಾಯಕ ಹೆಗಡೆ ಕಲಗದ್ದೆ, ನೀಲಕೋಡ ಶಂಕರ ಹೆಗಡೆ, ನಾಗೇಂದ್ರ ಮುರೂರು, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ ಪಾಲ್ಗೊಳ್ಳುವರು. ವೇಷ ಭೂಷಣದಲ್ಲಿ ಎಂ.ಆರ್.ನಾಯ್ಕ ಕರ್ಸೆಬೈಲ್ ಸಹಕಾರ ನೀಡಲಿದ್ದಾರೆ. ಸ್ಥಳೀಯ ಲಕ್ಷ್ಮೀನೃಸಿಂಹ ಯುವಕ ಮಂಡಳಿ ಪುಟ್ಟಣಮನೆ ಸಹಕಾರ ನೀಡಲಿದೆ ಎಂದರು.
ಈ ವೇಳೆ ಸ್ಥಳೀಯ ಉಮೇಶ ಭಟ್ಟ ವರ್ಗಾಸರ, ಕಲಾವಿದ ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ಮಹೇಶ ಹೆಗಡೆ ಇತರರು ಇದ್ದರು.
ಅಗಲಿದ ತಾಳಮದ್ದಲೆ ವಿದ್ವಾಂಸ ಕೃಷ್ಣ ಭಟ್ಟರಿಗೂ ಹಾಗೂ ಅನಂತಶ್ರೀ ಪ್ರಶಸ್ತಿ ಪುರಸ್ಕೃತರಾಗಲಿರುವ ವಿದ್ವಾನ್ ಉಮಾಕಾಂತ ಭಟ್ಟ ಅವರಿಗೆ ವರ್ಗಾಸರ ತಾಳಮದ್ದಲೆ ಕ್ಷೇತ್ರಕ್ಕೆ ಶ್ರೀಕಾರ ಹಾಕಿದೆ. ವರ್ಗಾಸರ ಗಣಪತಿ ಭಟ್ಟ ಅವರು ಪ್ರೇರಣೆ ಆಗಿದ್ದರು. ಇಲ್ಲೇ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವದು ಹೆಮ್ಮೆಯ ಸಂಗತಿ –ಉಮೇಶ ಭಟ್ಟ ವರ್ಗಾಸರ
ಅನಂತ ಪ್ರತಿಷ್ಠಾನ ಯಕ್ಷಗಾನ ಹಾಗೂ ಇತರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಏ.೩೦ರ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನಕ್ಕೆ ಎಲ್ಲರೂ ಬನ್ನಿ –ಕೇಶವ ಹೆಗಡೆ ಕೊಳಗಿ, ಕಾರ್ಯದರ್ಶಿ ಪ್ರತಿಷ್ಠಾನ