ಶಿರಸಿ: ಸಿದ್ದಾಪುರದ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಅನಂತಶ್ರೀ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಉಮಾಕಾಂತ ಭಟ್ ಕೆರೇಕೈ ಅವರಿಗೆ ಪ್ರಕಟಿಸಲಾಗಿದೆ.
ಈ ವಿಷಯ ತಿಳಿಸಿದ ಪ್ರತಿಷ್ಠಾನದ ಕಾರ್ಯದರ್ಶಿ, ಭಾಗವತ ಕೇಶವ ಹೆಗಡೆ ಕೊಳಗಿ, ಕಳೆದ ಐದು ದಶಕಗಳಿಂದ ತಾಳಮದ್ದಲೆ ಕ್ಷೇತ್ರದಲ್ಲಿ ಹೆಸರು ಮಾಡಿದ ಕೆರೇಕೈ ಅವರು ಯಕ್ಷಗಾನದ ಮೇರು ಕಲಾವಿದ ದಿ. ಕೊಳಗಿ ಅನಂತ ಹೆಗಡೆ ಅವರ ಒಡನಾಡಿಯೂ ಆಗಿದ್ದವರು. ಸಂಸ್ಕೃತ, ಕನ್ನಡ, ಆಂಗ್ಲ ಭಾಷೆಯ ಪಂಡಿತರು. ಪ್ರವಚನಕಾರರು, ಯಕ್ಷಗಾನ ಕಲಾವಿದರೂ ಆಗಿರುವ ಅವರು, ಲೇಖಕರು, ಕೃತಿಕಾರರು. ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಕೂಡ ಪಡೆದ ಕೆರೇಕೈ ಅವರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿರುವದು ಹೆಮ್ಮೆ ಎಂದರು.
ಏ.೩೦ರಂದು ಶಿರಸಿಯ ವರ್ಗಾಸರದಲ್ಲಿ ಹಮ್ಮಿಕೊಂಡ ಪ್ರಶಸ್ತಿ ಪ್ರದಾನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಟ, ನಿರ್ದೇಶಕ ಸುಚೀಂದ್ರ ಪ್ರಸಾದ, ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ, ಸೆಲ್ಕೋ ಇಂಡಿಯಾದ ಸಿಇಒ ಮೋಹನ ಹೆಗಡೆ ಇತರರು ಪಾಲ್ಗೊಳ್ಳಲಿದ್ದಾರೆ.