ಕುಮಟಾ: ತಾಲೂಕಿನ ಹೊಸಳ್ಳಿ ಕಲ್ಲಬ್ಬೆ ಗ್ರಾಮದಲ್ಲಿ ಕುಟುಂಬದ ಮಧ್ಯೆ ಶುರುವಾದ ಚಿಕ್ಕ ಜಗಳ ಮುಗ್ದ ಬಾಲಕಿಯೊಬ್ಬಳ ಕೊಲೆಯಲ್ಲಿ ಅಂತ್ಯವಾಗಿದೆ.
ಪ್ರಥಮ ಹಂತದಲ್ಲಿ ಬಾಲಕಿ ಕಾಲು ಜಾರಿ ನೀರಿನಲ್ಲಿ ಬಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು, ನಂತರ ಮೃತಳ ತಾಯಿ ನೀಡಿದ ದೂರಿನಲ್ಲಿ ಕೊಲೆಯಾಗಿರುವ ಬಗ್ಗೆ ಸಂಶಯ ವ್ಯಕ್ತಿಪಡಿಸಿದ್ದಳು. ತನಿಖೆ ಕೈಗೊಂಡ ಪೋಲೀಸರು ವಿಚಾರಣೆ ನಡೆಸುವ ವೇಳೆ ಕೊಲೆಯಾಗಿರುವ ಬಗ್ಗೆ ಸತ್ಯಾಂಶ ಹೊರಬಿದ್ದಿದೆ. ಇಂದಿರಾ ಗೌಡ (12) ಮೃತ ವಿದ್ಯಾರ್ಥಿನಿ. ವಿದ್ಯಾರ್ಥಿನಿಯ ಚಿಕ್ಕಮ್ಮನಾದ ಲಕ್ಷ್ಮೀ ಗೌಡಳೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಆರೋಪಿ ಲಕ್ಷ್ಮೀ ಗೌಡ ಇಂದಿರಾಳ ಕೆನ್ನೆಗೆ ಬಾರಿಸಿದ್ದಾಳೆ. ಪ್ರಜ್ನೆ ತಪ್ಪಿ ಬಿದ್ದಿದ್ದ ಬಾಲಕಿಯನ್ನ ನಂತರ ಎಳೆದೊಯ್ದು ಪಕ್ಕದ ಹಳ್ಳದಲ್ಲಿ ಎಸೆದಿರುವ ಬಗ್ಗೆ ಮೃತ ಬಾಲಕಿಯ ಚಿಕ್ಕಮ್ಮನೇ ತನಿಖೆಯ ವೇಳೆ ಒಪ್ಪಿಕೊಂಡಿದ್ದಾಳೆ.
ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ನವೀನ್ ನಾಯ್ಕ, ರವಿ ಗುಡ್ಡಿ, ಪದ್ಮಾ ದೇವಳಿ, ಚಂದ್ರಮತಿ ಪಟಗಾರ ನೇತೃತ್ವದಲ್ಲಿ ಸುನೀಲ್ ಹಾಗೂ ಸಿಬ್ಬಂದಿ ರಾಜು ನಾಯ್ಕ, ರವಿ ನಾಯ್ಕ, ರೂಪಾ ನಾಯಕ, ಅರ್ಚನಾ ಪಟಗಾರ, ಸಾಧನಾ ನಾಯಕ ಹಾಗೂ ತಂಡವು ಪ್ರಕರಣ ದಾಖಲಾದ 5 ದಿವಸಗಳೊಳಗಾಗಿ ಈ ಪ್ರಕರಣದ ಆರೋಪಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.