ಭಟ್ಕಳ: ಮುಂಡಳ್ಳಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಭಾವಕವಿ ಉಮೇಶ ಮುಂಡಳ್ಳಿ ಹಾಗೂ ಅವರ ಮಡದಿ ರೇಷ್ಮ ಉಮೇಶ ಅವರು ಬರೆದಿರುವ ಎರಡು ಭಕ್ತಿಗೀತೆಗಳ ಆಡಿಯೋ ಲೋಕಾರ್ಪಣೆ ಗೊಂಡಿತು.
ಉಮೇಶ ಮುಂಡಳ್ಳಿಯವರೇ ಸ್ವತಃ ಸ್ವರಸಂಯೋಜನೆ ಮಾಡಿ ಹಾಡಿರುವ ಗೀತೆಗಳನ್ನು ದೇವಸ್ಥಾನದ ವರ್ಧಂತಿ ಉತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀದೇವರ ಎದುರು ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹೇಮಂತ ಮೊಗೇರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ನಾಗರಾಜ ಭಟ್, ಸಾಹಿತ್ಯ ಸಂಗೀತದ ಜೋಡಿಯಾದ ದಂಪತಿಯಿಂದ ಇನ್ನಷ್ಟು ಸಾಹಿತ್ಯ ಸಂಗೀತ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ದೇವಸ್ಥಾನದ ವತಿಯಿಂದ ಈ ಸಂದರ್ಭದಲ್ಲಿ ಉಮೇಶ ಮುಂಡಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯ ಸುರೇಶ ಆಚಾರ್ಯ, ಕವಿ ಗಾಯಕ ಉಮೇಶ ಮುಂಡಳ್ಳಿ, ಕವಯತ್ರಿ ರೇಷ್ಮ ಉಮೇಶ, ನಿನಾದ ಉತ್ಥಾನ ಮೊದಲಾದವರು ಇದ್ದರು.