• Slide
    Slide
    Slide
    previous arrow
    next arrow
  • ಧರಣಿ ನಿರತ ಮೊಗೇರ ಸಮಾಜದ ಜನರ ಜೊತೆ ಸಂಸದ ಅನಂತಕುಮಾರ್ ಸಮಾಲೋಚನೆ

    300x250 AD

    ಭಟ್ಕಳ: ಮೊಗೇರ ಸಮಾಜದ ಜನರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರದಂದು ಸಂಸದ ಅನಂತಕುಮಾರ್ ಹೆಗಡೆ ಅವರು ಭೇಟಿ ನೀಡಿ ಮೊಗೇರ ಸಮಾಜದ ಜನರ ಜೊತೆ ಮಾತುಕತೆ ನಡೆಸಿದರು.

    ಉತ್ತರ ಕನ್ನಡ ಜಿಲ್ಲಾ ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಕಳೆದ 28 ದಿನದಿಂದ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಧರಣಿ ನಿರತರಾದ ಮೊಗೇರ ಸಮಾಜದ ಜನರನ್ನು ಸಂಸದ ಅನಂತಕುಮಾರ್ ಹೆಗಡೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಮೊಗೇರ ಸಮಾಜದ ಮುಖಂಡ ಹಾಗೂ ವಕೀಲರೂ ಆದ ನಾಗರಾಜ ಎ.ಎಚ್. ಮಾತನಾಡಿ, ಮೊಗೇರ ಸಮುದಾಯಕ್ಕೆ ಯಾವಾಗ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲಾಯಿತು ಮತ್ತು ಯಾವಾಗ ಹಿಂಪಡೆಯಲಾಯಿತು, ನಂತರ ದಿನಗಳಲ್ಲಿ ಅದನ್ನು ಪಡೆಯಲು ತಮ್ಮ ಸಮುದಾಯದ ಜನರು ನಡೆಸಿದ ಕಾನೂನಾತ್ಮಕ ಹೋರಾಟದ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

    ನಂತರ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ, ಮಂಗಳೂರಿನಿಂದ ಬರುವಾಗ ಕೋಟದಲ್ಲಿ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಒಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳುವಂತೆ ಸಚಿವರಿಗೆ ಸಲಹೆ ನೀಡಿದ್ದೇನೆ. ಈಗಾಗಲೇ ಈ ವಿಷಯದ ಕುರಿತು ಸಾಕಷ್ಟು ವಾದ- ವಿವಾದಗಳು ಆಗಿಹೋಗಿವೆ. ಎಲ್ಲ ವಾದ-ವಿವಾದಗಳು ನಮಗೆ ಪುಸ್ತಕ ರೂಪದಲ್ಲಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇವುಗಳನ್ನೆಲ್ಲ ಕ್ರೋಢೀಕರಿಸಿ ಒಂದು ಪೂರ್ವ ಸಿದ್ಧತೆ ಸಭೆಯನ್ನು ಹಮ್ಮಿಕೊಳ್ಳುವಂತೆ ತಿಳಿಸಿದ್ದೇನೆ.

    ಪೂರ್ವಭಾವಿ ಸಭೆಯಲ್ಲಿ ತಜ್ಞರ ಹಾಗೂ ಪರಿಣಿತರ ತಂಡ, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಧುಸ್ವಾಮಿ ಇರಲಿದ್ದಾರೆ. ಇವರು ಏ.23 ಅಥವಾ 24ರಂದು ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದಾರೆ. ಆ ನಿರ್ಧಾರವನ್ನು ನಿಮ್ಮ ಮುಂದೆ ಪ್ರಸ್ತಾಪಿಸಿ ಮುಖ್ಯಮಂತ್ರಿ ಬಳಿ ಸಭೆ ನಡೆಸುವ ಬಗ್ಗೆ ತಿಳಿಸಿದ್ದೇನೆ. ಸಭೆಯ ನಂತರ ಒಂದು ಫೈಲ್ ರೆಡಿ ಮಾಡಿ ಮುಖ್ಯಮಂತ್ರಿಗಳೊಂದಿಗೆ ಸಭೆ ಹಮ್ಮಿಕೊಂಡು ಆ ಸಭೆಯಲ್ಲಿ ನಾನು ಇರುತ್ತೇನೆ. ಈ ಬಗ್ಗೆ ಮಾತನಾಡಲು ಬೇಕಾಗಿರುವಂತಹ ಎಲ್ಲಾ ತರದ ಸಿದ್ಧತೆ ಮಾಡಿಕೊಳ್ಳೋಣ. ಈಗಾಗಲೇ ನಿಮ್ಮೆಲ್ಲರ ಅಪೇಕ್ಷೆಗೆ ತಕ್ಕಂತೆ ಸರ್ಕಾರ ಫೈಲನ್ನು ರೆಡಿ ಮಾಡಿದೆ ಎಂದರು.

    300x250 AD

    ಒಂದು ಪ್ರತಿಭಟನೆ ಅಥವಾ ಧರಣಿ ಸತ್ಯಾಗ್ರಹ ಮಾಡುವುದು ಸರ್ಕಾರದ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು. ಆದರೆ ಈಗಾಗಲೇ ಸರ್ಕಾರದ ಗಮನವನ್ನು ಸೆಳೆದಿದ್ದೀರಿ. 28 ದಿನದಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೀರಿ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ತಮ್ಮ ಧರಣಿಯನ್ನು ಇಲ್ಲಿಗೆ ನಿಲ್ಲಿಸಿ ಮುಂದಿನ ನಿರ್ಧಾರ ಬರುವವರೆಗೆ ಶಾಂತಿಯುತವಾಗಿ ಇರಿ ಎಂದು ಮನವಿ ಮಾಡಿದರು. ಧರಣಿಯನ್ನು ನಿಲ್ಲಿಸುವುದು ಬಿಡುವುದು ನಿಮ್ಮ ನಿರ್ಧಾರ ಎಂದೂ ಹೇಳಿದರು.

    ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ, ನಾವು ಕಳೆದ 12 ವರ್ಷಗಳಿಂದ ಶಾಂತಿಯುತವಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ನಮ್ಮ ಮಕ್ಕಳು ನೌಕರಿ ಪಡೆಯಲು, ವಿದ್ಯಾಭ್ಯಾಸಕ್ಕೆ ತೀರ ತೊಂದರೆಗಳಾಗಿವೆ. ಅದಕ್ಕಾಗಿ ನಮ್ಮ ಪರವಾಗಿ ಸರ್ಕಾರದ ಮಟ್ಟದಲ್ಲಿ ಒಂದು ನಿರ್ಧಾರ ಬರುವವರೆಗೂ ನಾವು ಹೋರಾಟವನ್ನು ಹಾಗೂ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಬಿಜೆಪಿಯ ಪ್ರಮುಖರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top