ಶಿರಸಿ ;ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಮಹಿಳೆಯರಿಗಾಗಿ ಸ್ಕೇಟಿಂಗ್ ಕ್ರೀಡೆಯ ತರಬೇತಿಯು ಶಿರಸಿಯಲ್ಲಿ ಆರಂಭಗೊಂಡಿರುತ್ತದೆ.
ಕಳೆದ ನಾಲ್ಕು ವರ್ಷಗಳಿಂದ ಸುಮಾರು ಒಂದುವರೆ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅದ್ವೈತ ಸ್ಕೇಟಿಂಗ್ ಕ್ಲಬಿನಿಂದ ತರಬೇತಿಯನ್ನು ನೀಡಲಾಗುತ್ತಿದೆ.
ಆದರೆ ಇಂದು ಪ್ರಪ್ರಥಮವಾಗಿ ತನ್ನ ಕ್ಲಬಿನ ಕ್ರೀಡಾಪಟುಗಳ ಮಾತೆಯರಿಗಾಗಿ ಸ್ಕೇಟಿಂಗ್ ತರಬೇತಿ ಶಿಬಿರವನ್ನು ಶಿರಸಿಯ ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ ಆರಂಭಿಸಲಾಯಿತು.
ಅಮ್ಮಂದಿರ ಸ್ಕೇಟಿಂಗ್ ತರಬೇತಿ ಶಿಬಿರಕ್ಕೆ ಶಿರಸಿಯ ಖ್ಯಾತ ಆಯುರ್ವೇದ ವೈದ್ಯೆ ಹಾಗೂ ರಾಷ್ಟ್ರೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಡಾ. ಪೂರ್ಣಿಮಾ ಚಾಲನೆ ನೀಡಿದರು.
ಇಂದು ಮಹಿಳೆಯರು ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಬೆಂಗಳೂರು ಮಂಗಳೂರಿನಂತಹ ಬೃಹತ್ ನಗರಗಳಲ್ಲಿ ನಡೆಯುತ್ತಿರುವ ಈ ವಿಶೇಷ ಸ್ಕೇಟಿಂಗ್ ಕ್ರೀಡೆಯ ತರಬೇತಿ ಶಿರಸಿ ನಗರದಲ್ಲಿ ಆರಂಭವಾಗಿದ್ದು ಹೆಮ್ಮೆಯ ವಿಷಯ. ಅದರಲ್ಲೂ ನಮ್ಮ ಶಿರಸಿಯ ಮಹಿಳೆಯರು ಇಂದು ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಪಡೆಯಲು ಆಸಕ್ತರಾಗಿದ್ದು ಸಂತಸದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಮಾತೆಯರು ಸ್ಕೇಟಿಂಗ್ ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿ ಶಿರಸಿಯ ಕೀರ್ತಿ ಪತಾಕೆಯನ್ನು ಮುಗಿಲೇತ್ತರಕ್ಕೆ ಹಾರಿಸಲಿ ಎಂದು ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ್ ಮಾತನಾಡಿ ಇಂದು ಅಮ್ಮಂದಿರಿಗಾಗಿ ಆರಂಭವಾದ ಈ ಸ್ಕೇಟಿಂಗ್ ತರಬೇತಿಯಿಂದ ಜಿಲ್ಲೆಯ ಕ್ರೀಡಾಕ್ಷೇತ್ರದಲ್ಲಿ ನೂತನ ಪರ್ವ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ತರಬೇತಿಯನ್ನು ಪಡೆಯುತ್ತಿರುವ ಶಿರಸಿಯ ಮಹಿಳಾ ಸ್ಕೇಟಿಂಗ್ ತಂಡಕ್ಕೆ ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ಧಿಸಲು ಬೇಕಾಗುವ ಎಲ್ಲ ಅನೂಕೂಲತೆಗಳನ್ನು ಅದ್ವೈತ ಸ್ಕೇಟಿಂಗ್ ಕ್ಲಬಿನಿಂದ ನೀಡಲಾಗುವುದು ಎಂದು ಶುಭಹಾರೈಸಿದರು.
ಅದ್ವೈತ ಸ್ಕೇಟಿಂಗ್ ಕ್ಲಬಿನ ನಿರ್ದೇಶಕಿ ಸುಲಕ್ಷಣಾ ಕುಡಾಳಕರ ಶಿಬಿರಕ್ಕೆ ಚಾಲನೆ ನೀಡಿದ ಡಾ ಪೂರ್ಣಿಮಾ ಅವರನ್ನು ಸ್ಕೇಟಿಂಗ್ ಮೂಲಕ ಶಾಲನ್ನು ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ಮಾತೆಯರು ತಮ್ಮ ಸ್ಕೇಟಿಂಗ್ ಕ್ರೀಡೆಯ ಪಯಣವನ್ನು ಆರಂಭಿಸಿದರು.
ಮಹಿಳೆಯರಿಗೆ ಈ ವಿಶೇಷ ಸ್ಕೇಟಿಂಗ್ ತರಬೇತಿಯನ್ನು ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್ ಕ್ರೀಡಾಪಟು ಹರ್ಷಿತಾ ಪೂಜಾರಿ ಹಾಗೂ ರಾಜ್ಯ ಮಟ್ಟದ ಸ್ಕೇಟಿಂಗ್ ತರಬೇತುದಾರರಾದ ಶ್ಯಾಮ ಸುಂದರ ಮತ್ತು ತರುಣ ಗೌಳಿ ಇವರು ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಕೇಟಿಂಗ್ ಕ್ಲಬಿನ ನಿರ್ದೇಶಕ ವಿಶ್ವನಾಥ ಕುಡಾಳಕರ, ಪಯಣ ಪ್ರವಾಸೋದ್ಯಮ ಸಂಸ್ಥೆಯ ಕಾರ್ಯದರ್ಶಿ ಪರಮೇಶ್ವರ ನಾಯ್ಕ ಹಾಗೂ ಪಾಲಕ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅರ್ಚನಾ ಪಾವಸ್ಕರ ನಿರೂಪಿಸಿದರು.