ಕುಮಟಾ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ವಿಧಾನಸಭೆಗೆ ಸ್ಪರ್ಧಿಸುವ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ತಿಳಿದಿಲ್ಲ. ಒಂದೊಮ್ಮೆ ಕುಮಟಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಸಂಪೂರ್ಣ ಮನಸ್ಸಿನಿಂದ ಹಿಂದೆ ಸರಿಯುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ.
ಭಟ್ಕಳದಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಭೆಯೊಂದರಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು-ಸಂತರು ಸ್ಪರ್ಧಿಸಲಿದ್ದಾರೆ ಹಾಗೂ ನಾನೇ ಸ್ವತಃ ಭಟ್ಕಳದಲ್ಲಿ ಪ್ರಯೋಗ ಮಾಡುತ್ತೇನೆ ಎಂದು ಘೋಷಿಸಿದ್ದರು.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಸ್ವಾಮೀಜಿಯವರ ಬಗ್ಗೆ ಅಭಿಮಾನ, ಗೌರವ ಇದೆ. ಕುಮಟಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಸಂಪೂರ್ಣ ಮನಸ್ಸಿನಿಂದ ಹಿಂದೆ ಸರಿಯುತ್ತೇನೆ. ಅಷ್ಟೇ ಅಲ್ಲದೇ ಸ್ವಾಮೀಜಿಗಳಿಗೆ ತನು-ಮನ-ಧನ ಸಹಕಾರ ನೀಡಲು ಸಿದ್ಧನಿರುವುದಾಗಿ ತಿಳಿಸಿದರು.
ಚುನಾವಣೆಗೆ ಒಂದು ವರ್ಷ ಇರುವಾಗಲೇ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ರಾಜಕೀಯ ಕಾವು ಏರುತ್ತಿರುವುದರಿಂದ ಈ ಬಾರಿಯ ಟಿಕೇಟ್ ಯಾರಿಗೆ ಸಿಗಬಹುದೆಂಬ ಕುತೂಹಲ ಹೆಚ್ಚಾಗಿದೆ ಎಂದರು. ಶ್ರೀಗಳ ಹೇಳಿಕೆಯ ಬೆನ್ನಲ್ಲೇ ಶಾಸಕರ ಈ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ.