ಭಟ್ಕಳ: ರಾಮರಾಜ್ಯದ ಪರಿಕಲ್ಪನೆಯಲ್ಲಿ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುತ್ತೇವೆ. ಅದರಡಿ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರು ಸ್ಪರ್ಧಿಸಲಿದ್ದಾರೆ. ನಾನೇ ಈ ಬಾರಿ ಭಟ್ಕಳದಲ್ಲಿ ಈ ಪ್ರಯೋಗ ಮಾಡುತ್ತೇನೆ. ಚುನಾವಣೆ ಪ್ರಚಾರಕ್ಕಾಗಿ ನನ್ನ 5 ಲಕ್ಷ ನಾಗಾಸಾಧುಗಳು ಬರುತ್ತಾರೆ ಎಂದು ನಾಮಧಾರಿ ಸಮಾಜದ ಕುಲಗುರು, ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಘೋಷಿಸಿದ್ದಾರೆ.
ಶ್ರೀಕ್ಷೇತ್ರ ಸಾರದಹೊಳೆ ಹಳೆಕೋಟೆ ಹನುಮಂತ ದೇವರ 6ನೇ ದಿನದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ ಇತರರ ಉಪಸ್ಥಿತಿಯಲ್ಲಿ ಮಾತನಾಡಿದರು
ರಾಜ್ಯಾಂಗ, ಸಂವಿಧಾನ ಏನೆಂದೇ ನಮ್ಮ ನಾಯಕರುಗಳಿಗೆ ಗೊತ್ತಿಲ್ಲ. ರಾಜಕೀಯಕ್ಕೆ ಬರುವುದೇ ಸುಖಕ್ಕಾಗಿ, ಪ್ರಚಾರಕ್ಕಾಗಿ, ದುಡ್ಡಿಗಾಗಿ ಎಂಬುದು ಒಬ್ಬ ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರ ಪರಿಕಲ್ಪನೆಯಾಗಿದೆ. ಕಾನೂನು ಗೊತ್ತಿಲ್ಲದವರು ರಾಜ್ಯಾಂಗದೊಳಗೆ ಬಂದು ಕಾನೂನು ಮಾಡಲು ಹೇಗೆ ಸಾಧ್ಯ? ಹೀಗಾಗಿ ತಿದ್ದುಪಡಿಯೊಂದನ್ನು ಮಾಡಬೇಕು. ಯಾರೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಆತ ಕನಿಷ್ಠ ಪದವಿಯನ್ನಾದರೂ ಪಡದಿರಬೇಕು. ಮಂತ್ರಿಯಾಗಲು ಕಾನೂನು ವಿದ್ವಾಂಸರೇ ಆಗಿರಬೇಕು. 4ನೇ ಕ್ಲಾಸು, 10ನೇ ಕ್ಲಾಸು ಓದಿದವರನ್ನ ಮಂತ್ರಿ ಮಾಡಿದರೆ ರಾಜ್ಯದ ಕಾನೂನುಗಳನ್ನು ಹೇಗೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ನಾವು ಬೇಸತ್ತು ಹೋಗಿದ್ದೇವೆ. ನಿಮಗೆ ರಿಪೇರಿ ಮಾಡಲು ಬರುತ್ತಿಲ್ಲ. ಇದು ದುಃಖದ ಸಂಗತಿ. ನಾವು ಇಡೀ ದೇಶವನ್ನು ಸುತ್ತುವ ಸಂತರು. ನಮ್ಮ ಜುನಾಕಾರದ ಸುಮಾರು 5 ಲಕ್ಷ ಸಾಧು- ಸಂತರುಗಳಲ್ಲಿ ನಾನೂ ಒಬ್ಬ. ನಾವು ಎರಡು- ಮೂರು ತಿಂಗಳಿಗೆ ಕುಳಿತು ಮಾತನಾಡುತ್ತೇವೆ. ಈ ರಾಜ್ಯಾಂಗದ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ ಎಂಬ ಕಳವಳ ನಮ್ಮೆಲ್ಲರದ್ದಾಗಿದೆ. ವಿಧಾನಸಭೆಯಲ್ಲಿ ಮಾರ್ಕೆಟ್‍ನಲ್ಲಿ ಗಲಾಟೆ ಆದಂತೆ ಆಗುತ್ತದೆ. ಆಗ ವಿಧಾನಸಭಾಧ್ಯಕ್ಷರಾದವರ ಪರಿಸ್ಥಿತಿ ನೋಡುಲಾಗುವುದಿಲ್ಲ. ಇವುಗಳನ್ನು ನೋಡಿದರೆ ಸಂವಿಧಾನ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ, ರಾಜ್ಯಾಂಗದ ಪರಿಕಲ್ಪನೆ ಇದೆಯೇ ಇಲ್ಲವೋ ಗೊತ್ತಾಗುವುದಿಲ್ಲ. ಇದಕ್ಕೆಲ್ಲ ಸಮಗ್ರ ಬದಲಾವಣೆ ಆಗಬೇಕು. ಹೀಗಾಗಿ ನಾವು ಸನ್ಯಾಸಿಗಳು ತಯಾರಾಗಿದ್ದೇವೆ. ಇದಕ್ಕೆ ನಮಗೆ ಆದಿತ್ಯನಾಥರೇ ಪ್ರೇರಣೆ. ಉತ್ತರಾಖಂಡದಲ್ಲಿ ಈ ಬಗ್ಗೆ ಅನೇಕ ಸಭೆಗಳನ್ನೂ ನಡೆಸಿದ್ದೇವೆ ಎಂದರು.
ನಮಗೆ ಸಂಬಳ ಕೊಡುವುದು ಬೇಡ. ಪಡಿತರ ಅಥವಾ ಊಟ ಕೊಟ್ಟರೆ ಸಾಕು. ನಮ್ಮ ಪರಿಕಲ್ಪನೆ ಸನಾತನ ಹಿಂದೂ ಧರ್ಮವನ್ನ ತಿದ್ದುವುದಾಗಿದೆ. ಆದರೆ ಈಗಿರುವವರಿಗೆ ತಿದ್ದಲು ಆಗುತ್ತಿಲ್ಲ. ತಪಸ್ಸು ಮಾಡಿದರೆ ಉದ್ಧಾರ ಮಾಡಲಾಗುವುದಿಲ್ಲ ಎಂದು ನಾವೆಲ್ಲ ತೀರ್ಮಾನಕ್ಕೆ ಬಂದಿದ್ದೇವೆ. ನನಗೆ ರಾಜಕೀಯದ ಆಸೆ ಇಲ್ಲ. ಆದರೆ ದುಃಖದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದೇನೆ. ನಾನೇ ಮೊದಲು ಭಟ್ಕಳದಲ್ಲಿ ಈ ಪ್ರಯೋಗ ಮಾಡಿಸುತ್ತೇನೆ. ಸುನೀಲ್ ನಾಯ್ಕ, ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ ಯಾರೇ ಆಕಾಂಕ್ಷಿ ಇದ್ದರೂ ಈ ವೇಳೆ ಹಿಂದೆ ಸರಿಯುತ್ತಾರೆ ಎಂದು ಭಾವಿಸಿದ್ದೇನೆ ಎಂದರು.
ಚುನಾಯಿತರಾದ ಶಾಸಕರಿಗೆ ನಿವೃತ್ತ ನ್ಯಾಯಾಧೀಶರಿಂದ ತಿಂಗಳಿಗೆ ಐದು ದಿನವಾದರೂ ತರಬೇತಿ ನೀಡಬೇಕು. ಸುಮ್ಮನೆ ಸಂವಿಧಾನ ಸಂವಿಧಾನ ಎಂದು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ. ಸಂವಿಧಾನದ ತಲೆಯೂ ಗೊತ್ತಿಲ್ಲ, ಬುಡವೂ ಗೊತ್ತಿಲ್ಲ. ವಿಧಾನಸಭೆಯಲ್ಲಿ ಇಡೀ ದಿನ ಜಗಳ ಮಾಡುತ್ತಾರೆ. ಹೊರಗೆ ಬರುವಾಗ ಹೆಗಲ ಮೇಲೆ ಕೈ ಹಾಕಿಕೊಂಡು ಚಹಾ- ಊಟ ಸವಿಯುತ್ತಾರೆ. ಹೊರಗಡೆ ಈ ಹುಡುಗರೆಲ್ಲ ಕುಸ್ತಿ ಮಾಡುತ್ತಾರೆ. ಇದನ್ನ ನೋಡಿ ಸಂತರಿಗೆಲ್ಲ ಕಣ್ಣೀರು ಬರುತ್ತಿದೆ ಎಂದ ಅವರು, ಸ್ವಾಮಿಗಳು ಓಟಿಗೆ ನಿಲ್ಲುತ್ತಾರೆಂದು ಯಾರೂ ಹೆದರಬೇಕಿಲ್ಲ. ಸಂವಿಧಾನದಲ್ಲಿ ಎಲ್ಲ ಜಾತಿ- ಜನಾಂಗಕ್ಕೂ ಸಮಾನ ಅವಕಾಶವಿದೆ. ಎಲ್ಲರನ್ನೂ ಸರಿಸಮಾನವಾಗಿ ಕಾಣಲು ನಾವು ರಾಜಕೀಯಕ್ಕೆ ಸ್ಪರ್ಧಿಸುತ್ತಿದ್ದೇವೆ. ಎಲ್ಲರೂ ಸಹೋದರತ್ವ ಪಾಲಿಸಬೇಕು ಎಂದರು.
ಸರ್ಕಾರ ಪ್ರವಾಸಕ್ಕೆ ಮಂತ್ರಿಗಳನ್ನ ವಿದೇಶಕ್ಕೆ ಕಳುಹಿಸಿತ್ತದೆ. 1- 2 ಲಕ್ಷದ ರೂಮಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಏನು ಪ್ರಯೋಜನ? ನಿದ್ದೆ ಮಾಡಲು 1- 2 ಲಕ್ಷದ ರೂಮು ಯಾಕಯ್ಯ? 5- 6 ಗಂಟೆಯ ನಿದ್ರೆಯನ್ನ 500 ರೂಪಾಯಿಯ ರೂಮಿನಲ್ಲೂ ಮಾಡಬಹುದು. 50- 100 ರೂಪಾಯಿಗೆ ಊಟ ಸಿಗುತ್ತದೆ. ಆದರೆ ಬೇಕಾಬಿಟ್ಟಿಯಾಗಿ ಪ್ರಜೆಗಳ ದುಡ್ಡನ್ನ ಪೋಲು ಮಾಡಲಾಗುತ್ತಿದೆ. ಇದನ್ನ ನೋಡಿದರೆ ನಮಗೆ ಕಣ್ಣೀರು ಬರುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಬೇಸರ ವ್ಯಕ್ತಪಡಿಸಿದರು.
ರಾಜಕೀಯದ ಕುರಿತಂತೆ ಸ್ವಾಮೀಜಿಯವರಾಡಿದ ಮಾತಿನಲ್ಲಿ ಬಲವಾದ ಎಚ್ಚರಿಕೆಯ ಸಂದೇಶವಿದೆ. ಸಂವಿಧಾನದ ಆಶಯದಂತೆ ರಾಜಕೀಯ ನಾಯಕರು ಜನರಿಗೆ ಉತ್ತಮ ಆಡಳಿತ ನೀಡುವ ಜವಾಬ್ದಾರಿಯಿದ್ದು, ಇದನ್ನೇ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನಮಗೆಲ್ಲರಿಗೂ ಸಂದೇಶ ನೀಡಿದ್ದಾರೆ. ನಿಮ್ಮಿಂದ ಸಾಧ್ಯವಾಗದೇ ಇದ್ದಲ್ಲಿ ಧಾರ್ಮಿಕ ಕ್ಷೇತ್ರಗಳ ಸಂತರು ಬಂದು ರಾಜ್ಯದ ಆಡಳಿತಕ್ಕೆ ಮುನ್ನುಡಿ ಬರೆಯಲಿದ್ದಾರೆಂಬ ಮಾತುಗಳು ಗಂಭೀರತೆಯಿಂದ ಸ್ವೀಕರಿಸಿ ಉತ್ತಮ ಆಡಳಿತ ನೀಡಬೇಕಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು
ಪಕ್ಷಗಳು ದುಡ್ಡು ಇದ್ದವರಿಗೆ ಟಿಕೆಟ್ ಕೊಡುತ್ತವೆ. ಹೀಗಾಗಿ ಆಯ್ಕೆಯಾದವರು ವಿಧಾನಸಭೆಯಲ್ಲಿ ಕುರ್ಚಿ, ಟೇಬಲ್ ಮುರಿಯುವ ಕೆಲಸವನ್ನೇ ಮಾಡುತ್ತಾರೆ. ಎಲ್ಲಾ ಪಕ್ಷದವರು ಗೂಂಡಾಗಳಿಗೇ ಟಿಕೆಟ್ ಕೊಡುತ್ತಾರೆ. ರಾಜಕೀಯ ಕೆಟ್ಟಿದೆ, ಮತದಾರರೂ ಕೆಟ್ಟು ಹೋಗಿದ್ದಾರೆ ಎಂದು ಮಾಜಿ ಶಾಸಕರಾದ ಜೆ.ಡಿ.ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುಗಳು ನಮ್ಮನ್ನು ಜಾಗೃತಿ ಮಾಡಲು ಹೇಳಿಕೆ ನೀಡಿದ್ದಾರೆ. ಅವರು ರಾಜಕೀಯಕ್ಕೆ ಬರುವುದು ಬೇಡ, ಆ ಬಗ್ಗೆ ಅವರು ಯೋಚನೆಯೂ ಮಾಡುವುದಿಲ್ಲ ಎಂದು ಮಾಜಿ ಶಾಸಕ ಮಂಕಾಳ ವೈದ್ಯ, ಹೇಳಿದರು
ಮಾಜಿ ಸಚಿವ ಆರ್.ಎನ್.ನಾಯ್ಕ, ಸ್ವಾಮೀಜಿ ಚುನಾವಣೆಗೆ ನಿಂತರೆ ಸಹಮತ. ಆದರೆ ಅವರು ತಮಾಷೆಗೆ ಹೇಳಿದ್ದಾರೆ. ಸ್ಪೀಕರ್ ಕಾಗೇರಿಯವರು ಆರು ಬಾರಿ ಗೆದ್ದಿದ್ದು ಸಾಕು. ಅವರು ಸ್ವಾಮೀಜಿಯವರಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಅಲ್ಲಿ ಸ್ಪರ್ಧಿಸಲಿ. ಯಾಕೆಂದರೆ ಅಲ್ಲಿ ನಾಮಧಾರಿಗಳು ಹೆಚ್ಚಿದ್ದಾರೆ. ನಾನು ಪ್ರಚಾರಕ್ಕೆ ಬರುತ್ತೇನೆ. ಸ್ವಾಮಿಗಳು ಸರ್ವಸಂಗ ಪರಿತ್ಯಾಗಿ ಎಂದರು .