ಅಂಕೋಲಾ: ತಾಲೂಕಿನಲ್ಲಿ ಕೋವಿಡ್ ಲಾಕ್‍ಡೌನ್ ಬಳಿಕ ಮೀಟರ್ ಬಡ್ಡಿ ಸಾಲದ ದಂಧೆಗೆ ಬಲ ಬಂದಿದ್ದು, ತನ್ನ ಕಬಂಧಬಾಹುವನ್ನ ಮತ್ತಷ್ಟು ವಿಸ್ತರಿಸಿಕೊಂಡಿದೆ.
ಕೋವಿಡ್ ವೈರಾಣುವಿನಿಂದ ತಪ್ಪಿಸಿಕೊಳ್ಳಲು ಸರಕಾರ ಲಾಕ್‍ಡೌನ್ ಆದೇಶ ಜಾರಿ ಮಾಡಿತ್ತು. ಇದರಿಂದ ಚಿಕ್ಕ ಪುಟ್ಟ ಉದ್ಯಮವು ಸಂಪೂರ್ಣ ನೆಲಕಚ್ಚಿದ್ದವು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಧನಿಕರು, ತಮ್ಮಲ್ಲಿರುವ ದುಡ್ಡನ್ನು ಮೀಟರ್ ಬಡ್ಡಿ ದಂಧೆಗೆ ತೊಡಗಿಸಿದ್ದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡವರು, ರೈತರು, ಮೀನುಗಾರರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಮುಂತಾದವರು ಕುಟುಂಬ ನಿರ್ವಹಣೆಗಾಗಿ ಸಾಲ ಪಡೆದು ಅದನ್ನು ತೀರಿಸಲಾಗದೆ ಇಂದು ದಂಧೆಕೋರರ ಕಪಿಮುಷ್ಠಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ.
ಬಡ್ಡಿ ನೀಡದಿದ್ದರೆ ಹಲ್ಲೆ, ಬೆದರಿಕೆಯ ಕರೆ: ಸಾಲ ಪಡೆದುಕೊಂಡ ಬಡವರು ನಿಗದಿತ ಸಮಯಕ್ಕೆ ಬಡ್ಡಿ ನೀಡದೆ ಇದ್ದರೆ ಅವರ ಮೇಲೆ ಹಲ್ಲೆ ಹಾಗೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದ್ದು, ಕೆಲವೊಬ್ಬರನ್ನು ಥಳಿಸಿದ ಘಟನೆಯು ನಡೆದಿದೆ ಎನ್ನಲಾಗುತ್ತಿದೆ. ಇಂತಹ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರದಿರುವುದರಿಂದ ದಂಧೆಕೋರರ ಅಣತೆಗೆ ಮಿತಿಯೇ ಇಲ್ಲದಂತಾಗಿದೆ.
ಚೆಕ್, ಬಾಂಡ್ ಪೇಪರ್ ಪಡೆದು ಬ್ಲಾಕ್‍ಮೇಲ್: ಜೀವನ ನಿರ್ವಹಣೆ ಹಾಗೂ ಅಗತ್ಯ ಸಂದರ್ಭದಲ್ಲಿ ಹಣದ ತೀರಾ ಅವಶ್ಯಕತೆ ಇದ್ದವರು ಮುಂದೇನಾಗುತ್ತದೆಯೋ ಎನ್ನುವುದನ್ನು ಯೋಚಿಸದೆ ತಮ್ಮ ಚೆಕ್ ಅಥವಾ ಬಾಂಡ್ ಪೇಪರ್ ನೀಡಿ ದಂಧೆಕೋರರಿಂದ ಸಾಲ ಪಡೆಯುತ್ತಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಸಾಲಗಾರರಿಗೆ ನಿಮ್ಮ ಮನೆ ಹರಾಜು ಮಾಡುತ್ತೇನೆ, ಜೈಲಿಗೆ ಕಳುಹಿಸುತ್ತೇನೆ ಎಂದು ಬ್ಲಾಕ್‍ಮೇಲ್ ಮಾಡುತ್ತಾ ಒತ್ತಡ ಹೇರುತ್ತಾ ಅವರನ್ನು ಹೈರಾಣಾಗಿಸುತ್ತಿದ್ದಾರೆ.
ಕೆಲ ಸರಕಾರಿ ನೌಕರರೂ ದಂಧೆಕೋರರು!! ಸರಕಾರಿ ನೌಕರಿಯಲ್ಲಿದ್ದುಕೊಂಡು ಹಾಗೂ ಸರಕಾರಿ ನೌಕರಿಯಿಂದ ನಿವೃತ್ತಿ ಹೊಂದಿದವರೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಬಗ್ಗೆ ಕೇಳಿಬಂದಿದೆ. ತಮ್ಮ ರಕ್ಷಣೆಗೆ ಅಮಾಯಕ ದಷ್ಟ- ಪುಷ್ಟ ಹುಡುಗರನ್ನು ಬಡ್ಡಿ ವಸೂಲಿಗೆ ಇಟ್ಟು ಸಾಲಗಾರರಿಗೆ ಒತ್ತಡ ಹೇರುವಂತೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಪಾಠ ಹೇಳಬೇಕಾದ ಶಿಕ್ಷಕರು ಸಹಿತ ಬಡ್ಡಿ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದು, ಜೈಲಿನ ಸಮೀಪ ಬಂದು ಹೋದ ಘಟನೆಯು ನಡೆದಿದೆ.
ಪೋಲೀಸ್ ಇಲಾಖೆ ಮೀಟರ್ ಬಡ್ಡಿ ದಂಧೆಯ ವಿರುದ್ಧ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಂಡು ದಂಧೆಗೆ ಕಡಿವಾಣ ಹಾಕಿದರೆ ಮುಂಬರುವ ದಿನಗಳಲ್ಲಿ ಇದಕ್ಕಾಗಿ ಬಲಿಯಾಗಬೇಕಿರುವ ಅದೆಷ್ಟೋ ಬಡ – ಬಗ್ಗರ ಪ್ರಾಣ ಉಳಿಸಿದಂತಾಗಲಿದೆ.
ಲೇವಾದೇವಿದಾರರು ಮಾನಸಿಕ ಕಿರುಕುಳ, ಬೆದರಿಕೆಯೊಡ್ಡುತ್ತಿದ್ದರೆ ತಕ್ಷಣ ಠಾಣೆಗೆ ಬಂದು ದೂರನ್ನು ನೀಡಬಹುದು. ನಾವು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ–ಸಂತೋಷ್ ಶೆಟ್ಟಿ, ಸಿಪಿಐ
ಕೋವಿಡ್ ಸಮಯದಲ್ಲಿ ನಾನು ಮನೆಯ ನಿರ್ವಹಣೆಗೆ ಒಬ್ಬರಿಂದ 15% ಬಡ್ಡಿಗೆ 50 ಸಾವಿರ ಸಾಲವನ್ನು ಪಡೆದಿದ್ದೆ. ಆದರೆ ಅದೇ ಸಾಲ ಆ ಬಡ್ಡಿ ಈ ಬಡ್ಡಿ ಸೇರಿ ಇಂದು 1 ಲಕ್ಷದ 60 ಸಾವಿರವಾಗಿದೆ. ಬಡ್ಡಿ ನೀಡಬೇಕೆಂದು ಪ್ರತಿನಿತ್ಯ ಮನೆ ಬಾಗಿಲಿಗೆ ಬರುತ್ತಿದ್ದಾರೆ. ದಿಕ್ಕೆ ತೋಚದಂತಾಗಿದೆ..– ಹೆಸರು ಹೇಳಲು ಇಚ್ಛಿಸದ ಸಾಲಗಾರ