ಕಾರವಾರ: ಗೋವಾಕ್ಕೆ ತೆರಳಿದ್ದ ಕರ್ನಾಟಕದ ಟ್ಯಾಕ್ಸಿಯ ಪರ್ಮಿಟ್ ಅವಧಿ ಮುಗಿದಿದ್ದಕ್ಕೆ 10,262 ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಸಾಮಾನ್ಯವಾಗಿ ಪರ್ಮಿಟ್ ಅವಧಿ ಮುಗಿದರೆ ವಿಶೇಷ ಪರವಾನಗಿ ಪಡೆಯಲು ರೂ.100 ಅಥವಾ ರೂ. 200 ವೆಚ್ಚವಾಗುತ್ತದೆ. ಆ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್ ಟಿ ಓ) ಕಚೇರಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಆರ್ ಟಿ ಓ ಗಳಲ್ಲಿ ಪಾವತಿಸಲಾಗುತ್ತದೆ. ಆದರೆ, ಗುರುವಾರದಿಂದ ನಾಲ್ಕು ದಿನಗಳ ಕಾಲ ರಜೆ ಇರುವ ಕಾರಣ ಆರ್ ಟಿ ಓಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ಆನ್ಲೈನ್‍ನಲ್ಲಿ ಪರವಾನಗಿ ಪಡೆಯುವ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಟ್ಯಾಕ್ಸಿ ಚಾಲಕರು ಈ ಪರವಾನಗಿಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಚೆಕ್ ಪೋಸ್ಟ್ ಗಳಲ್ಲಿ ವಿಶೇಷ ಪರವಾನಗಿ ಪಡೆಯುವ ಸೌಲಭ್ಯವಿತ್ತು. ಹೀಗಾಗಿ ಟ್ಯಾಕ್ಸಿ ಚಾಲಕರು ಗೋವಾ ಗಡಿಯಲ್ಲಿಯೇ ಪರ್ಮಿಟ್ ಪಡೆಯಲು ತೆರಳಿದ್ದರು. ಆದರೆ, ಅಲ್ಲಿ ಏಪ್ರಿಲ್ 1ರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪರ್ಮಿಟ್ ಮುಗಿದು ಒಂದೆರಡು ದಿನವಾಗಿದ್ದಕ್ಕೆ ಕರ್ನಾಟಕದಿಂದ ಗೋವಾಕ್ಕೆ ತೆರಳಿದ್ದ 40 ಟ್ಯಾಕ್ಸಿಗಳನ್ನು ಗೋವಾದ ಮೊಲ್ಲೆಮ್ ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದು ದಂಡ ಭರಿಸಿಕೊಳ್ಳಲಾಗಿದೆ.
ಕೋಟ್ — ಪ್ರವಾಸಿಗರು ಗೋವಾಕ್ಕೆ ಪ್ರವೇಶಿಸಲು ದಂಡದಂತಹ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ. ನಮ್ಮದೇ ಆದ ಅರ್ಜುನ್ ಟೂರ್ಸ್ ಅಂಡ್ ಟ್ರಾವೆಲ್ಸ್‍ನ ಟ್ಯಾಕ್ಸಿ ಡ್ರೈವರ್ 10,262 ರೂ. ದಂಡ ಪಾವತಿಸಿದ್ದಾರೆ. ಅಲ್ಲದೆ, ವ್ಯಾನ್‍ಗಳಂತಹ ದೊಡ್ಡ ವಾಹನಗಳಿಗೆ 17,000 ರೂ. ಮತ್ತು ಪ್ರವಾಸಿ ಬಸ್‍ಗಳಿಗೆ 25,000 ರೂ. ದಂಡವನ್ನು ಗೋವಾ ಗಡಿಯಲ್ಲಿ ವಿಧಿಸಲಾಗುತ್ತಿದೆ.–ಎಂ.ರವಿ, ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ