ದಾಂಡೇಲಿ: ಹತ್ತು ದಿನಗಳ ಹಿಂದೆ ವರ್ಗಾವಣೆಗೊಂಡಿರುವ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ಅಖಿಲ್ ಅಹ್ಮದ್ ಕಿತ್ತೂರ ಅವರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಮತ್ತು ಬಾಣಂತಿಯರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ಶರದ್ ನಾಯಕ ಅವರು ಸೋಮವಾರ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಿರುವ ವಿಚಾರ ತಿಳಿದ ತಕ್ಷಣ ನೂರಾರು ಜನರ ಆಸ್ಪತ್ರೆಯ ಆವರಣದಲ್ಲಿ ಜಮಾಗೊಂಡಿದ್ದರು. ವೈದ್ಯಾಧಿಕಾರಿ ಡಾ.ಶರದ್ ನಾಯಕ ಅವರು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಆಕ್ಷೇಪವೆತ್ತಿದ ಮಹಿಳೆಯರು ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ಅಖಿಲ್ ಕಿತ್ತೂರ ಅವರು ಉತ್ತಮ ಸೇವೆ ನೀಡುತ್ತಿದ್ದರು. ಆದರೆ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಈಗ ನೇಮಕ ಮಾಡಲ್ಪಟ್ಟಿರುವ ಗುತ್ತಿಗೆ ಆಧಾರದ ಪ್ರಸೂತಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಹಿಂದೇಟು ಹಾಕುತ್ತಿರುವುದರಿಂದ ಹೆರಿಗೆಗೆ ಬರುವ ಮಹಿಳೆಯರು ಅನಿವಾರ್ಯವಾಗಿ ಬೇರೆ ಆಸ್ಪತ್ರೆಗೆ ಹೋಗುವಂತಾಗಿದೆ ಎಂದು ವೈದ್ಯಾಧಿಕಾರಿಗಳ ಮುಂದೆ ಸದ್ಯದ ಸ್ಥಿತಿಯನ್ನು ವಿವರಿಸಿದರು. ಆಗ ವೈದ್ಯರು ಡಾ.ಅಖಿಲ್ ಕಿತ್ತೂರ ಅವರ ವಿರುದ್ದ ಸ್ಥಳೀಯ ಪತ್ರಿಕೆಯೊಂದು ವರದಿ ಪ್ರಕಟಿಸಿರುವುದು ಹಾಗೂ ದೂರಿನ ಕಾರಣ ವರ್ಗಾವಣೆ ಮಾಡಲಾಗಿದೆ, ಮರು ನೇಮಕ ಅಸಾಧ್ಯವೆಂದು ತಿಳಿಸಿದರು.
ಆದರೆ ಸಾರ್ವಜನಿಕರು ಮತ್ತು ನೆರೆದಿದ್ದ ಮಹಿಳೆಯರು ಪಟ್ಟು ಹಿಡಿದು ವೈದ್ಯರ ಮರು ನೇಮಕಕ್ಕೆ 63 ಜನರ ಹಸ್ತಾಕ್ಷರವುಳ್ಳ ಪ್ರತಿಯನ್ನು ಜಿಲ್ಲಾ ವೈದ್ಯಾಧಿಕಾರಿಗೆ ಸಲ್ಲಿಸಿದರು. ಪ್ರತಿಯನ್ನು ಪಡೆದುಕೊಂಡ ಜಿಲ್ಲಾ ವೈದ್ಯಾಧಿಕಾರಿ ಡಾ. ಶರದ್ ನಾಯಕ ಅವರು ನಿಮ್ಮೆಲ್ಲರ ಒತ್ತಾಯದ ಮೇರೆಗೆ ಡಾ.ಅಖಿಲ್ ಕಿತ್ತೂರ ಅವರನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಮರು ನೇಮಕಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರುಗಳಾದ ದಾದಾಪೀರ್ ನದೀಮುಲ್ಲಾ, ಶಿವಾನಂದ ಗಗ್ಗರಿ, ಪ್ರವೀಣ ಕೊಠಾರಿ, ಮಂಜುನಾಥ ಪಂತೋಜಿ, ಅಬ್ಬಾಸ್ ಉಡುಪಿ, ಕಾಸೀಮ್ ಪಿರ್ಜಾದೆ, ಸೈಯದ್ ಆಶ್ರಪ್, ಅಸ್ಲಾಂ ದೇಸಾಯಿ, ಸಂತೋಷ್ ತೇಗದಾಳ, ರಾಜೇಶ್ ಜಲ್ದಿ, ಸದ್ದಾಂ ಬಾಳೆಕುಂದ್ರಿ, ಲಕ್ಷ್ಮಣ ಸಂದಂ ಹಾಗೂ ಮಹಿಳೆಯರು ಮತ್ತು ಬಾಣಂತಿಯರು ಉಪಸ್ಥಿತರಿದ್ದರು.