• Slide
    Slide
    Slide
    previous arrow
    next arrow
  • ಜೀವನ ಮೌಲ್ಯಗಳನ್ನು ಜನತೆಗೆ ತಲುಪಿಸುವ ಮಾಧ್ಯಮ ಯಕ್ಷಗಾನ: ಸ್ವರ್ಣವಲ್ಲಿ ಶ್ರೀ

    300x250 AD

    ಯಲ್ಲಾಪುರ: ಶಾಸ್ತ್ರೀಯವಾಗಿಯೇ ಅಭ್ಯಸಿಸುವ, ಪ್ರದರ್ಶಿಸಲ್ಪಡುವ ಯಕ್ಷಗಾನ ಕಲೆಯ ಮಹತ್ವವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಿಂಬಿಸಬೇಕು. ಯಕ್ಷಗಾನ ಶಾಸ್ತ್ರೀಯ ಕಲೆ ಎಂದು ಸರ್ಕಾರ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

    ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಸ್ಥಾನದ ಸಭಾಭವನದಲ್ಲಿ ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರ ‘ಯಕ್ಷಗಾನ ಗಾನ ಸಂಹಿತೆ’ ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ‌ನೀಡಿದರು. ಯಕ್ಷಗಾನಕ್ಕೆ ಶಾಸ್ತ್ರೀಯತೆ ಭೂಷಣ. ಯಕ್ಷಗಾನದ ಶಾಸ್ತ್ರೀಯತೆಯನ್ನು ಸಾರಲು ಗಣಪತಿ ಭಟ್ಟರಂತಹ ವಿದ್ವಾಂಸರ ಇಂತಹ ಗ್ರಂಥಗಳು ಪೂರಕವಾಗುತ್ತದೆ. ಖಚಿತವಾಗಿ ಹಾಗೂ ಸಮರ್ಥವಾಗಿ ಯಕ್ಷಗಾನದ ಸಂಪೂರ್ಣ ಚಿತ್ರಣ ನೀಡುವ ಸಂಹಿತೆ ಇದಾಗಿದ್ದು, ಯುವ ಕಲಾವಿದರಿಗೆ ಇದು ಮಾರ್ಗದರ್ಶಿಯಾಗಲಿ ಎಂದರು.

    ಕಲೆ ಜನಪ್ರಿಯವಾಗುವುದಕ್ಕಿಂತ ಮುಖ್ಯವಾಗಿ ಜನಹಿತವನ್ನು ಉಂಟು ಮಾಡುವಂತಿರಬೇಕು. ಅಂತಹ ಜನಹಿತದ ಉದ್ದೇಶ ಯಕ್ಷಗಾನ ಕಲೆಯಲ್ಲಿದೆ. ಸಂಸ್ಕಾರ, ಜೀವನ ಮೌಲ್ಯಗಳನ್ನು ಪ್ರಭಾವಶಾಲಿಯಾಗಿ ಜನರಿಗೆ ತಲುಪಿಸುವ ಮಾಧ್ಯಮವಾದ ಯಕ್ಷಗಾನ ಎಲ್ಲೆಡೆ ವಿಜೃಂಭಿಸಲಿ. ಗಣಪತಿ ಭಟ್ಟರಂತಹ ವಿದ್ವಾಂಸರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆಯಲಿ ಎಂದರು.

    ಗ್ರಂಥವನ್ನು ಪರಿಚಯಿಸಿದ ವಿದ್ವಾನ್ ಉಮಾಕಾಂತ ಭಟ್ಟ, ಯಕ್ಷಗಾನ ಗಾನ ಸಂಹಿತೆ ಶತಮಾನದ ಕೃತಿಯಾಗಿದೆ. ಯಕ್ಷಗಾನ ಜಾನಪದ ಕಲೆಯೋ, ಶಾಸ್ತ್ರೀಯ ಕಲೆಯೋ ಎಂಬ ಜಿಜ್ಞಾಸೆಗೆ ತೆರೆ ಎಳೆಯುವ, ಸಮನ್ವಯ ಸಾಧಿಸುವ ಕಾರ್ಯವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಗ್ರಂಥದಲ್ಲಿ ದಾಖಲಾದ ಗಣಪತಿ ಭಟ್ಟರ ಗಾನಪದ್ಧತಿ, ಕೇವಲ ಅಲ್ಲಿಗೆ ಸೀಮಿತವಾಗದೇ, ಅದನ್ನು ಯುವ ಕಲಾವಿದರಿಗೆ ಪಾಠ ಮಾಡಿ, ರಂಗಕ್ಕೆ ತಂದು, ಆ ಮೂಲಕ ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಿದಾಗ ಗ್ರಂಥ ಸಾರ್ಥಕತೆ ಪಡೆಯುತ್ತದೆ ಎಂದರು.

    300x250 AD

    ಕೃತಿಕಾರ, ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನ ಕಲೆಯಿಂದಲೇ ಬದುಕು ಕಟ್ಟಿಕೊಂಡ ನಾನು, ಕಲೆಗಾಗಿ ನನ್ನಿಂದಾದ ಸೇವೆಯನ್ನು ಸಮರ್ಪಿಸುವ ಕನಸಿತ್ತು. ಆ ಕನಸನ್ನು ಈ ಗ್ರಂಥ ಸಾಕಾರಗೊಳಿಸಿದೆ ಎಂದರು.

    ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕಲಾವಿದರಾದ ಶಿವಾನಂದ ಹೆಗಡೆ ಕೆರೆಮನೆ, ಎಂ.ಎನ್.ಹೆಗಡೆ ಹಳವಳ್ಳಿ, ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಇಂದಿರಾ ಗಣಪತಿ ಭಟ್ಟ ಇತರರಿದ್ದರು. ಡಾ.ಮಹಾಬಲೇಶ್ವರ ಭಟ್ಟ, ಡಾ.ಶಂಕರ ಭಟ್ಟ ಬಾಲೀಗದ್ದೆ ನಿರ್ವಹಿಸಿದರು.

    ಪ್ರಮದಾ ಉಪಾಧ್ಯಾಯ ಅವರ ಕಥಕ್ ನೃತ್ಯ ಗಮನ ಸೆಳೆಯಿತು. ನಂತರ ಯಕ್ಷರಾಗ ರಸರಂಜಿನಿ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್ಟ ಹಾಗೂ ರಾಘವೇಂದ್ರ ಆಚಾರಿ ಜನ್ಸಾಲೆ ಅವರು ಸುಧನ್ವಾರ್ಜುನ, ಭೀಷ್ಮಪರ್ವ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು. ಮದ್ದಲೆವಾದಕರಾಗಿ ಶಂಕರ ಭಾಗ್ವತ, ಗಣಪತಿ ಭಾಗ್ವತ ಕವಾಳೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ ಕನಕನಹಳ್ಳಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top