ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹೊಸಳ್ಳಿಯಲ್ಲಿ 1401ನೇ ಇಸವಿ ಕಾಲಮಾನದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಅಪ್ರಕಟಿತ ಈ ಶಾಸನದ ಮೇಲೆ ಬೆಳಕು ಚೆಲ್ಲಿದ್ದಾರೆ. ಇದರಿಂದಾಗಿ ನೆಗ್ಗು ಪಂಚಾಯಿತಿ ವ್ಯಾಪ್ತಿಯ ಇತಿಹಾಸದ ಬಗ್ಗೆ ಇದೇ ಮೊದಲ ಬಾರಿ ಹೆಚ್ಚಿನ ಮಾಹಿತಿ ಲಭ್ಯವಾದಂತಾಗಿದೆ.
ಇಲ್ಲಿಯ ಹೊಸಳ್ಳಿ ಗ್ರಾಮದಲ್ಲಿ ಈ ವೀರಗಲ್ಲು ಮಣ್ಣು ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸಕಾರರಾದ ಲಕ್ಷ್ಮೀಶ್ ಸೋಂದಾರವರು ಈ ಕುರಿತು ಅಭ್ಯಸಿಸಿದಾಗ ಇದೊಂದು ವೀರಗಲ್ಲು ಶಾಸನವಾಗಿದ್ದು ಕ್ರಿ.ಶ 1401ರ ಕಾಲಮಾನದ್ದಾಗಿದೆ,ವಿಶೇಷವೆಂದರೆ ಆರುನೂರು ವರ್ಷಗಳ ಹಿಂದೆಯೇ ನೆಬ್ಬೂರು ಪ್ರದೇಶ ಅದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಅಪೂರ್ವ ಸಂಗತಿ ಈ ಶಾಸನದಿಂದ ತಿಳಿಯುತ್ತದೆ ಎಂದು ಸೋಂದಾರವರು ತಿಳಿಸಿದ್ದಾರೆ.
ಆಸವರಸ ಒಡೆಯರು ಸತ್ತಗೋವೆಯ (ಸಪ್ತಕೊಂಕಣ) ರಾಜ್ಯವನ್ನಾಳುವ ಸಂದರ್ಭದಲ್ಲಿ ಬಳ್ಳಿಗಾವಿಯ ಅರಸು ಶಷ್ಠಿರಾಯನಿಗೂ ಮತ್ತು ನಾರಣಪ್ಪ ದಂಡನಾಯಕರಿಗೂ ನಡೆದ ಯುದ್ಧದಲ್ಲಿ ನೆಬ್ಬೂರಿನ ತಾಳೆಯ ನಾಯಕನು ರಣರಂಗದಲ್ಲಿ ಕಾದಾಡಿ ಎದುರಾದ ವೈರಿಗಳನ್ನು ಗೆದ್ದು ರಣದೊಳಗೆ ಮಡಿದು ವೀರ ಸ್ವರ್ಗವ ಪಡೆದ ಸಂಗತಿಯನ್ನು ಈ ವೀರಗಲ್ಲು ಶಾಸನ ತಿಳಿಸುತ್ತದೆ ಎಂದಿದ್ದಾರೆ.
ಶಾಸನದ ಸುತ್ತ ಮಹಾಸತಿ ಕಲ್ಲುಗಳೂ ಪತ್ತೆಯಾಗಿವೆ. ಸಾಮಾನ್ಯವಾಗಿ ವೀರಗಲ್ಲುಗಳು ಗಾಳಿ, ಮಳೆಯ ಅಬ್ಬರಕ್ಕೆ ಶತ ಶತಮಾನಗಳಿಂದ ಸಿಲುಕಿ ಉಲ್ಲೇಖಿಸಲಾದ ಅಕ್ಷರಗಳು ಸವಕಳಿ ಹೊಂದಿರುತ್ತವೆ. ಆದರೆ, ಹೊಸಳ್ಳಿಯಲ್ಲಿ ಈ ವೀರಗಲ್ಲಿ ಮಣ್ಣಿನ ಅಡಿಯಲ್ಲಿ ಸಿಲುಕಿದ್ದರಿಂದ ಹೆಚ್ಚಿನ ಸವಕಳಿ ಹೊಂದಿಲ್ಲ. ವೀರಗಲ್ಲಿನ ಮೊದಲ ಸಾಲಿನಲ್ಲಿ ಯುದ್ಧದ ಚಿತ್ರವಿದೆ.
ಈ ಕುರಿತಂತೆ ಶಾಸನದ ಅಧ್ಯಯನದಲ್ಲಿ ಹಿರಿಯ ಶಾಸನ ತಜ್ಞರಾದ ಎರಡು ಸಾಲಿನಲ್ಲಿ ಬರಹವಿದೆ. ಎರಡನೇ ಸಾಲಿನಲ್ಲಿ ವೀರ ಯೋಧನನ್ನು ವೈರಿಗಳು ಖಡ್ಗದಿಂದ ಇರಿಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹಗಳಿವೆ. ಮೂರನೇ ಸಾಲಿನಲ್ಲಿ ದೇವತೆಗಳು ವೀರನ್ನು ಸ್ವರ್ಗಕ್ಕೆ ಒಯ್ಯುತ್ತಿರುವ ಚಿತ್ರಗಳು ಮತ್ತು ಈ ಕುರಿತ ಬರಹ ಕೆತ್ತನೆ ಮಾಡಲಾಗಿದೆ. ನಾಲ್ಕನೇ ಸಾಲಿನಲ್ಲಿ ವೀರ ಸ್ವರ್ಗಸ್ಥನಾದ ಚಿತ್ರವಿದ್ದರೆ ಇನ್ನೂ ಮೇಲ್ಗಡೆ ಸೂರ್ಯ , ಚಂದ್ರರ ಚಿತ್ರವಿದೆ. ಸೂರ್ಯ ಚಂದ್ರ ಇರುವವರೆಗೂ ಈ ಯೋಧನ ಕೀರ್ತಿ ಅಮರವಾಗಿರುತ್ತದೆ ಎಂಬುದರ ಸಂಕೇತವಾಗಿದೆ ಎನ್ನುತ್ತಾರೆ ಲಕ್ಷ್ಮೀಶ ಸೋಂದಾ.
ಈ ಕಾರ್ಯಕ್ಕೆ ಎಂ.ನಾಗರಾಜ್ ರಾವ್ ಅವರು ಸಹಕರಿಸಿದ್ದಾರೆ ಎಂದು ಲಕ್ಷ್ಮೀಶ್ ಸೋಂದಾ ತಿಳಿಸಿದ್ದಾರೆ. ಕ್ಷೇತ್ರಾನ್ವೇಷಣೆಯ ಸಂದರ್ಭದಲ್ಲಿ ವಿ.ಎನ್ ಹೆಗಡೆ ಗೌಡನಮನೆ,ಮಂಜುನಾಥ ಸಾಯಿಮನೆ,ಎಂ.ಡಿ ಹೆಗಡೆ ಹೊಸಳ್ಳಿ,ಎಸ್.ವಿ.ಹೆಗಡೆ ಹಳ್ಳದಕೈ ಮುಂತಾದವರಿದ್ದರು.
ಕೋಟ್ : ಇತ್ತೀಚೆಗೆ ಸಿಕ್ಕ ವೀರಗಲ್ಲುಗಳ ಪೈಕಿ ಹೊಸಳ್ಳಿಯಲ್ಲಿ ಸಿಕ್ಕಿದ್ದು ಯಾವುದೇ ಹಾನಿ ಆಗದ ಸ್ಥಿತಿಯಲ್ಲಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಈ ವೀರಗಲ್ಲು ಪ್ರಮುಖ ಮೆಟ್ಟಿಲಾಗಲಿದೆ. – ಲಕ್ಷ್ಮೀಶ ಸೋಂದಾ.
………
ಈಗಿನ ನೆಬ್ಬೂರು ಸಂಪಖಂಡ ಹೋಬಳಿ ಜಾನ್ಮನೆ ಪಂಚಾಯತದ ಕೇವಲ ೧೫ ಮನೆಗಳಿರುವ ಒಂದು ಪುಟ್ಟ ಹಳ್ಳಿ. ಕೃಷಿಕರು, ಕೂಲಿ ಕಾರ್ಮಿಕರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.
ಕಾಲ ಚಕ್ರದ ತಿರುಗುವಿಕೆಯ ನಡುವೆ ೬೦೦ ವರ್ಷಗಳಲ್ಲಿ ಪ್ರಾಂತ್ಯವೊಂದು ಹಳ್ಳಿಯಾಗಿ ಬದಲಾವಣೆಯಾಗಿರುವ ಸೋಜಿಗವನ್ನು ಈ ವೀರಗಲ್ಲು ತೆರೆದಿಟ್ಟಿದೆ. ಇತಿಹಾಸದ ಪುಟಗಳಲ್ಲಿ ಎಲ್ಲೆಲ್ಲಿಯದೋ ಇತಿಹಾಸಗಳನ್ನು, ಯುದ್ಧಗಳನ್ನು ಉರು ಹಾಕುವ ನಮ್ಮ ಮಕ್ಕಳಿಗೆ ನಮ್ಮದೇ ಊರಿನ ಇತಿಹಾಸದ ಬಗ್ಗೆ ತಿಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಅಧ್ಯಯನಗಳಿಗೆ ಉತ್ತೇಜನ ನೀಡಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತಗೊಂಡಿದೆ.