ಕಾರವಾರ: ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯು ಮೀನುಗಾರರ ಬದುಕು ಹಾಗೂ ಕಡಲತೀರದ ಬಗ್ಗೆ ಜ್ಞಾನ ಪಡೆಯಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ನಗರದ ಬೈತಖೋಲ್‍ನಲ್ಲಿ ಉತ್ತರಕನ್ನಡ ಯುವ ಮೀನುಗಾರರ ಸಂಘರ್ಷ ಸಮಿತಿ ಭಾನುವಾರ ಆಯೋಜಿಸಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀನುಗಾರರಿಗೆ ಇಂದಿನ ದಿನಗಳಲ್ಲಿ ಮೀನು ಸಿಕ್ಕರೆ ಶಿಖಾರಿ, ಇಲ್ಲವೇ ಭಿಕಾರಿ ಎನ್ನುವ ಪರಿಸ್ಥಿತಿ ಇದೆ. ಮೀನಿಗಾಗಿ ಸಮುದ್ರದಲ್ಲಿ ಹರಸಹಾಸಪಟ್ಟರೂ, ಖಾಲಿ ಕೈಯಲ್ಲಿ ಮರಳಬೇಕಾದ ಅನಿವಾರ್ಯತೆಯನ್ನು ಹಲವು ಬಾರಿ ಮೀನುಗಾರರು ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಫರ್ಧೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಸ್ಪರ್ಧಾಳುಗಳನ್ನು ಕರೆತರುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಉತ್ತರಕನ್ನಡ ಜಿಲ್ಲಾ ಮೀನು ಮಾರಾಟಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ಮೀನುಗಾರರದ್ದು ಸಂಕಷ್ಟದ ಬದುಕು. ಮೀನುಗಾರಿಕೆಗೆ ತೆರಳಿದಂತಹ ಎಲ್ಲರಿಗೂ ಮೀನುಗಳು ಸಿಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಗಾಳಿ ಮಳೆಯ ನಡುವೆ ಮೀನಿಗಾಗಿ ಹೋರಾಡುವ ಮೀನುಗಾರರಿಗೇ ಇದೀಗ ಗಾಳ ಹಾಕಿ ಮೀನು ಹಿಡಿಯುವ ಪದ್ಧತಿ ಮರೆತುಹೋಗಿದೆ. ಆದರೆ ಈ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರು ಈ ಸ್ಪರ್ಧೆ ಆಯೋಜಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಫರ್ಧೆಗೆ ಜಿಲ್ಲೆ ಮಾತ್ರವಲ್ಲದೇ, ಹುಬ್ಬಳ್ಳಿ ಹಾಗೂ ವಿವಿಧ ಭಾಗಗಳಿಂದ ಸುಮಾರು 30 ಕ್ಕೂ ಅಧಿಕ ಸ್ಫರ್ಧಾಳುಗಳು ಆಗಮಿಸಿದ್ದರು. ಸಾಂಪ್ರದಾಯಿಕವಾಗಿ ಕೈಯಲ್ಲಿ ಹಾಕುವ ಮತ್ತು ರೇಡಿಯಂನ ಆಧುನಿಕ ಗಾಳದ ಮೂಲಕ, ಹೀಗೆ ಎರಡು ವಿಧದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯು ಮದ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೂ ನಡೆಯಿತು. ಪರಿಣಿತ ಗಾಳ ಹಾಕುವ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆಲವರು ಸಣ್ಣ ಪುಟ್ಟ ಮೀನುಗಳನ್ನು ಹಿಡಿದರೆ ಇನ್ನು ಕೆಲವರು ಎರಡು ಕೆ.ಜಿ ತೂಕದ ಮೀನನ್ನು ಸಹ ಹಿಡಿದು ಗಮನ ಸೆಳೆದರು. ಸ್ಪರ್ಧಿಗಳನ್ನು ಹೊರತುಪಡಿಸಿ, ಗಾಳ ಹಾಕುವುದನ್ನು ವೀಕ್ಷಿಸಲು ಸಹ ಸಾಕಷ್ಟು ಮಂದಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ ಹರಿಕಂತ್ರ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕವಿತಾ ಆರ್.ಕೆ, ಮೀನುಗಾರ ಮುಖಂಡ ರಾಜೇಶ ಮಾಜಾಳಿಕರ್, ನಗರಸಭೆ ಸದಸ್ಯೆ ಸ್ನೇಹಲ್ ಚೇತನ ಹರಿಕಂತ್ರ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರತೀಕ ಶೆಟ್ಟಿ, ತುಕಾರಾಮ್ ಉಳ್ವೇಕರ್, ಅಶೋಕ ಕುಡ್ತಲ್ಕರ್, ಪುರುಷೋತ್ತಮ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.