ಶಿರಸಿ: ನಗರದಲ್ಲಿರುವ ಭಗವಾನ್ ಶ್ರೀ 1008 ಪಾಶ್ರ್ವನಾಥ ತೀರ್ಥಂಕರರ ಬಸದಿ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದ್ದು, ಮೇ 11, 12, 13ರಂದು ಪಂಚಕಲ್ಯಾಣ ಪ್ರತಿಷ್ಠೆ ಮಹಾಮಹೋತ್ಸವ ನಡೆಯಲಿದೆ ಎಂದು ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಸೋಮವಾರ ದೇವಾಲಯ ಕಾಮಗಾರಿ ವೀಕ್ಷಿಸಿ ಮಾಹಿತಿ ನೀಡಿದ ಶ್ರೀಗಳು, 800 ವರ್ಷಗಳ ಪ್ರಾಚೀನ ಇತಿಹಾಸವಿರುವ ಪಾರ್ಶ್ವನಾಥ ತೀರ್ಥಂಕರರ ಬಸದಿಯನ್ನು ಶಿಲಾಮಯವಾಗಿ ರೂಪಿಸಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಶಿಲಾಮಯ ಬಸದಿ ನಿರ್ಮಿಸಲಾಗಿದೆ. ಮೂಲಮೂರ್ತಿ 35 ವರ್ಷಗಳ ಹಿಂದೆಯೇ ಸೋಂದಾದ ಜೈನ ಮಠಕ್ಕೆ ಕೊಂಡೊಯ್ಯಲಾಗಿತ್ತು. ಇದೀಗ ಬಸದಿ ನಿರ್ಮಾಣವಾಗಿದ್ದು, ಅದೇ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಜಿನ ಮಂದಿರದ ಧಾಮಸಂಪ್ರೋಕ್ಷಣೆ ಮತ್ತು ಪಾರ್ಶ್ವನಾಥ ತೀರ್ಥಂಕರರ ಗರ್ಭ ಕಲ್ಯಾಣ ಜನ್ಮ ಕಲ್ಯಾಣ, ದೀಕ್ಷಾ ಕಲ್ಯಾಣ, ಕೇವಲ ಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣ ಪೂಜೆ ಎಂಬ ಪಂಚ ಕಲ್ಯಾಣ ಮಹಾಮಹೋತ್ಸವ ಮಾಡಲಾಗುವುದು. ಸಿದ್ಧಾಂತಯೋಗಿ ಶ್ರೀ 108 ಪುಣ್ಯಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳ ನಡೆಯಲಿವೆ ಎಂದು ತಿಳಿಸಿದರು. ವಿವಿಧ ಕ್ಷೇತ್ರದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದ ಶ್ರೀಗಳು, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ 17 ಬಸದಿಗಳ ಜೀರ್ಣೋದ್ಧಾರ ಕಾರ್ಯ ನಡೆದಿದೆ ಎಂದು ಹೇಳಿದರು.
ಈ ವೇಳೆ ಪ್ರಮುಖರಾದ ಮಹಾವೀರ ಆಲೂರು, ದೇವರಾಜ ಇತರರಿದ್ದರು.