ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ವೇದಾಧ್ಯಯನ ಶಿಬಿರ ಆರಂಭಗೊಂಡಿದ್ದು, ಈ ವರ್ಷ 55 ಬಾಲಕರು ಪಾಲ್ಗೊಂಡಿದ್ದಾರೆ. ಕಳೆದ 23 ವರ್ಷಗಳಿಂದ ಈ ವೇದಾಧ್ಯಯನ ಶಿಬಿರವನ್ನು ಇಲ್ಲಿಯ ದೇವಸ್ಥಾನ ಆಡಳಿತ ಸಮಿತಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಪ್ರಾಸಾದಿತ ರೈತ ಯುವಕ ಮಂಡಳಿ ಆಯೋಜಿಸಿಕೊಂಡು ಬಂದಿದೆ.
ನಮ್ಮ ಸಂಸ್ಕೃತಿ, ವೇದಗಳು ವಿದ್ಯಾರ್ಥಿ ಜೀವನದಲ್ಲಿಯೇ ಸಿಕ್ಕರೆ ಜೀವನ ಪರ್ಯಂತ ಅವು ಭದ್ರವಾಗಿ ನೆಲೆಯೂರುತ್ತವೆ. ಇಂದಿನ ಆಧುನಿಕ ಜೀವನ ಭರಾಟೆಯಲ್ಲಿ, ಜೀವನ ಕ್ರಮದಲ್ಲಿ ವೇದಾಧ್ಯಯನ ವಿದ್ಯಾರ್ಥಿಗಳಿಂದ ದೂರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೇದ, ಮಂತ್ರೋಪನಿಷತ್ ಗಳನ್ನು ವಿದ್ಯಾರ್ಥಿಗಳ ಮೂಲಕ ಉಜ್ವಲಗೊಳಿಸಲು ಈ ಮೂಲಕ ಯತ್ನ ನಡೆದಿದೆ. ಮಕ್ಕಳ ಬೇಸಿಗೆ ರಜೆಯ ಸದ್ಬಳಕೆಯೊಂದಿಗೇ ಸಂಸ್ಕೃತಿಯ ನೆಲೆಗಟ್ಟು ಹಾಕಿಕೊಡುವ ಕಾರ್ಯ ಇಲ್ಲಿ ಉಚಿತವಾಗಿ ನಡೆಯುತ್ತಿದೆ.
ನಾಲ್ವರು ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಗಣಪತಿ ಉಪನಿಷತ್, ಶ್ರೀಸೂಕ್ತ, ಪುರುಷ ಸೂಕ್ತ, ರುದ್ರ ಸೇರಿದಂತೆ ನಿತ್ಯ ಅನುಷ್ಠಾನದ ಅಗತ್ಯತೆಯ ವೇದಗಳನ್ನು ಹೇಳಿಕೊಡಲಾಗುತ್ತಿದೆ. ಭಾಗವಹಿಸುವ ವಿದ್ಯಾರ್ಥಿಗಳ ಖರ್ಚು ವೆಚ್ಛ, ಊಟೋಪಚಾರವನ್ನು ಸಂಯೋಜಕರೇ ಭರಿಸುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಕಲಿತ ಸಂಸ್ಕೃತಿ ಜೀವನ ಪರ್ಯಂತ ಭದ್ರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೇದ ಶಿಬಿರವನ್ನು ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ. – ಶ್ರೀಧರ ಭಟ್ ಕೊಳಗಿಬೀಸ್