ಸಿದ್ದಾಪುರ: ತನ್ನ ಪವಾಡಗಳಿಂದ ರಾಜ್ಯದ ಕೆಲವೇ ಕೆಲವು ಶಕ್ತಿಪೀಠಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತಿರುವ ಸಿದ್ದಾಪುರ ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿ ಮುನ್ಸೂಚನೆಯೊಂದು ದೊರೆತಂತೆ ಭಾಸವಾಯ್ತು. ದೇವರ ಪ್ರಸಾದವಾಗಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://youtu.be/UK7x9HAU0n4
ಭಾನುವಾರ ಶ್ರೀ ಕ್ಷೇತ್ರ ಕಲಗದ್ದೆಯಲ್ಲಿ ನಾಟ್ಯವಿನಾಯಕನ ಕಲ್ಯಾಣ ಲೀಲೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಅನೇಕಾನೇಕ ಭಕ್ತರು ಆಗಮಿಸಿದ್ದು, ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಸಹ ಈ ಕಲ್ಯಾಣ ಲೀಲೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾಟ್ಯ ವಿನಾಯಕನಿಗೆ ಪೂಜೆ ಸಲ್ಲಿಸಿದ ದೇಶಪಾಂಡೆ ಮತ್ತು ಸಂಗಡಿಗರು ಪವಾಡವೊಂದಕ್ಕೆ ಸಾಕ್ಷಿಯಾದರು.
ದೇವಾಲಯದ ಪ್ರಧಾನ ವಿಶ್ವಸ್ಥರಾದ ವಿನಾಯಕ ಹೆಗಡೆ ಅವರು, ಶ್ರೀದೇವರ ಬಳಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ‘ನಿನ್ನ ಸನ್ನಿಧಾನಕ್ಕೆ ಬಂದಿರುವ ಭಕ್ತನಿಗೆ ಶುಭವನ್ನುಂಟುಮಾಡು. ರಾಜಕೀಯದಲ್ಲಿ ಸಾಕಷ್ಟು ಅನುಭವ ಪಡೆದಿರುವ ದೇಶಪಾಂಡೆಗೆ ಈ ರಾಜ್ಯವನ್ನಾಳುವ ಯೋಗ್ಯತೆಯಿದೆ. ಭಗವಂತನಾದ ನಿನ್ನ ಅನುಗ್ರಹವಿದ್ದರೆ ಖಂಡಿತ ಸಮಸ್ತ ರಾಜ್ಯಗಳಿಸಿ, ಆಳುವ ಅವಕಾಶವಾಗುತ್ತದೆ. ಆ ದಿಶೆಯಲ್ಲಿ ಆಶೀರ್ವದಿಸು’ ಎಂದು ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಶ್ರೀದೇವರ ಬಲಗಡೆಯಿಂದ ಹೂವಿನ ಪ್ರಸಾದವಾಗಿದೆ.
ಈ ವೇಳೆ ಶಾಸಕ ದೇಶಪಾಂಡೆಯ ಜೊತೆ ಅನೇಕ ರಾಜಕೀಯ ಮುಖಂಡರು, ನೂರಾರು ಭಕ್ತರು ಉಪಸ್ಥಿತರಿದ್ದು, ಅವರೆಲ್ಲರೂ ಸಹ ಈ ಒಂದು ಅನುಭಾವಕ್ಕೆ ಒಳಗಾದರು ಎಂಬ ಮಾಹಿತಿ ದೊರೆತಿದೆ. ರಾಜ್ಯದ ವಿವಿಧೆಡೆಯಿಂದ ಕಲಗದ್ದೆಯ ನಾಟ್ಯವಿನಾಯನಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಲು ಸಾಕಷ್ಟು ಭಕ್ತರು ಬರುತ್ತಿದ್ದು, ಭಾನುವಾರ ನಡೆದ ಪ್ರಸಂಗವೊಂದು ರಾಜ್ಯ ರಾಜಕೀಯದ ಭವಿಷ್ಯದ ಮುನ್ಸೂಚನೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.