ಸಿದ್ದಾಪುರ: ತಾಲೂಕಿನ ಶಕ್ತಿಪೀಠವಾಗಿರುವ ಶ್ರೀ ನಾಟ್ಯವಿನಾಯಕ ದೇವರು ಹಾಗು ಶ್ರೀ ಲಲಿತಾ ರಾಜರಾಜೇಶ್ವರೀ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ಶ್ರೀ ವಿನಾಯಕ ಕಲ್ಯಾಣ ಲೀಲೋತ್ಸವ ಹಾಗೂ ಧರ್ಮಸಭೆಯು ಭಾನುವಾರ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದರ್ಬಾರ್ ಹಾಲ್ ನಲ್ಲಿ ನಡೆಯಿತು.
ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನಮಠದ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವದಿಸಿದರು.
ಸಾನ್ನಿಧ್ಯ ನೀಡಿದ ಶ್ರೀಗಳು, ಗಣೇಶ ಗಣಗಳಿಗೆ ನಾಯಕ, ಗಣೇಶ ಎಂದರೆ ಅಕ್ಷರ ಗಣಗಳಿಗೂ ನಾಯಕ. ಎಲ್ಲ ಗುಂಪುಗಳಿಗೆ ನಾಯಕ. ಬುದ್ದಿ ಪ್ರದಾಯಕ ಎಂದ ಅವರು ಭಗವಂತನ ಸಾನ್ನಿಧ್ಯ ನಮ್ಮದಾಗಿಸಿಕೊಳ್ಳಬೇಕು ಎಂದರು.
ಅಖಿಲ ಹವ್ಯಕ ಮಹಾಸಭಾದ ಗೌರವಾಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಕಲಗದ್ದೆಯಲ್ಲಿ ಭಗವಂತನ ಸಾನ್ನಿಧ್ಯ ಆಗಿದೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಭಾರತೀಯರ ಪರಂಪರೆಯಲ್ಲಿ ಜಗಳವಾಡುವಂತಿಲ್ಲ. ಆದರೆ, ಜಗಳವಾಡುತ್ತಾರೆ.
ನಂದಿ, ಸಿಂಹ, ನವಿಲು, ಇಲಿ, ಹಾವಿನ ವಾಹನ ಇದ್ದರೂ ಸಂಸಾರ ಚೆನ್ನಾಗಿದೆ. ನಾವು ಯಾಕೆ ಒಂದಾಗಿ ಇರಬಾರದು ಎಂದು ಪ್ರಸ್ತಾಪಿಸಿದರು.
ಸೆಲ್ಕೊ ಸೋಲಾರ್ ಸಿಇಓ ಮೋಹನ ಹೆಗಡೆ ಹೆರವಟ್ಟ ಶ್ರೀ ವಿನಾಯಕ ಲೀಲೆಯನ್ನು ಲೀಲಾಜಾಲವಾಗಿ ವಿವರಿಸಿ ಮಹಾಗಣಪತಿ ಮಹಿಮೆಯ ಕುರಿತು ಮಾತನಾಡಿದರು. ಪ್ರಸಿದ್ಧ ಜ್ಯೋತಿಷಿ ಮೋಹನಕುಮಾರ ಜೈನ್, ಧಾರವಾಡ ಹಾಲು ಒಕ್ಕೂಟ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೆಶಿನ್ಮನೆ, ಡಾ. ಶಶಿಭೂಷಣ ಹೆಗಡೆ , ಸತೀಶ ಹೆಗಡೆ ಶಿರಸಿ, ರಷ್ಮಿ ಹೆಗಡೆ, ವಿದ್ವಾಂಸರಾದ ಷಡಕ್ಷರಿ ಕೃಷ್ಣ ಭಟ್ಟ, ಅಡವಿತೋಟ ಕೃಷ್ಣ ಭಟ್ಟ ಇತರರು ಇದ್ದರು.
ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು. ಅರೆಹೊಳೆ ಸದಾಶಿವರಾಯ ವಂದಿಸಿದರು. ಗಣಪತಿ ಗುಂಜಗೋಡ ನಿರ್ವಹಿಸಿದರು.ಶ್ರೀದೇವರ ಕಲ್ಯಾಣೋತ್ಸವದಲ್ಲಿ ಮಾಜಿ ಸಚಿವ, ಶಾಸಕ ಅರ್.ವಿ. ದೇಶಪಾಂಡೆ ಭಾಗಿಯಾಗಿ ಶ್ರೀದೇವರ ದಿಬ್ಬಣವನ್ನು ಸ್ವಾಗತಿಸಿದರು.
ಏ.16, ಶನಿವಾರ ಮುಂಜಾನೆಯಿಂದ ಗಣೇಶ ಪ್ರಾರ್ಥನೆ, ನಾಂದಿ, ಪುಣ್ಯಾಹ, ಶ್ರೀ ಗಣೇಶ ಯಾಗ, ದೇವಾಲಯದ ಆವಾರದಿಂದ ಸುತ್ತಲಿನ ಹತ್ತು ಹಳ್ಳಿಗಳಿಗೆ ಶ್ರೀ ಮಹಾಗಣಪತಿಯ ದೇವರ ದಿಗ್ವಿಜಯ, ಮೆರವಣಿಗೆ, ಶ್ರೀದೇವರ ಪುರಪ್ರವೇಶ, ರಾಜೋಪಚಾರ ಸೇವೆ ನಡೆದವು.
ಏ.17, ಭಾನುವಾರ ಮುಂಜಾನೆಯಿಂದ ಗಣಹವನ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಮಾತೆಯರಿಂದ ಶ್ರೀದೇವರಿಗೆ ಮೋದಕ ಸಮರ್ಪಣೆ, ಮಹಾಮಂಗಳಾರತಿ ಹಾಗು ಪ್ರಸಾದ ಭೋಜನ ನಡೆದವು. ಅಪರಾಹ್ನ ಶ್ರೀದೇವರ ವೈಭವದ ದಿಬ್ಬಣ, ಪೂರ್ಣಕುಂಭ ಸ್ವಾಗತ, ಸಭಾ ಪೂಜೆ, ಸಿದ್ಧಿಬುದ್ಧಿಯವರೊಂದಿಗೆ ಶ್ರೀಮಹಾಗಣಪತಿ ಕಲ್ಯಾಣೋತ್ಸವ, ಮಹಾ ದರ್ಬಾರ್ ಪ್ರವೇಶ, ಶ್ರೀದೇವರಿಗೆ ಸುವಸ್ತುಗಳ ಕಪ್ಪಕಾಣಿಕೆಗಳ ಅರ್ಪಣೆ, ಕನಕಾಭಿಷೇಕ ಕಾಣಿಕೆ ಸಲ್ಲಿಕೆ, ರಾಜೋಪಚಾರ ಸೇವೆ, ರಥೋತ್ಸವ, ಡೋಲಾ ಯಂತ್ರೋತ್ಸವ, ಶ್ರೀ ಮಹಾಗಣಪತಿ ದೇವರನ್ನು ಸಿದ್ದಿ ಬುದ್ಧಿ ಸಹಿತ ಉಯ್ಯಾಲೆಯಲ್ಲಿ ತೂಗುವ ಸೇವೆ, ವೇದಘೋಷ, ನೃತ್ಯ ಸೇವಾ, ವಾದ್ಯ ಗೋಷ್ಠಿ, ಮಹಾಮಂಗಳಾರತಿ, ಪ್ರಸಾದ ಭೋಜನ ಹಾಗು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಮಹಾಗಣಪತಿಯ ಕಲ್ಯಾಣ ಲೀಲೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾದರು. ಕಲ್ಯಾಣೋತ್ಸವದಲ್ಲಿ ವರನ ಕಡೆಯವರಾಗಿ ಶ್ರೀದೇವಾಲಯದ ಪ್ರಧಾನ ವಿಶ್ವಸ್ಥರಾಗಿರುವ ವಿನಾಯಕ ಹೆಗಡೆ ಕಲಗದ್ದೆ, ವಧುವಿನ ಕಡೆಯವರಾಗಿ ಸತೀಶ ಹೆಗಡೆ ಶಿರಸಿ ಪಾಲ್ಗೊಂಡಿದ್ದರು.
ನಾವು ಮೊದಲು ಮನುಷ್ಯರಾಗಿರಬೇಕು. ಮನುಷ್ಯರಲ್ಲಿ ದೈವತ್ವ ಕಾಣಬೇಕು. ಧರ್ಮದಲ್ಲಿ ನಡೆಯಬೇಕು. ಪರಸ್ಪರ ಉಪಕಾರಿ ಆಗಿರಬೇಕು.-ಶ್ರೀ ಜೈನ ಶ್ರೀ