ಸಿದ್ದಾಪುರ: ಕ್ರೀಡೆಯಲ್ಲಿ ಆಸಕ್ತಿಯಿರುವ ಯುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯಿರಿ. ಜೀವನದಲ್ಲಿ ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಗೌರವ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಿ ಎಂದು ಹಲಗೇರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಮಂಜುನಾಥ್ ನಾಯ್ಕ ಸುತ್ಲ ಮನೆ ಹೇಳಿದರು.
ಅವರು ತಾಲೂಕಿನ ಸಂಪಖಂಡದಲ್ಲಿ ಇತ್ತೀಚಿಗೆ ಶ್ರೀನಾಗ ಚೌಡೇಶ್ವರಿ ಯುವ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ತೃತೀಯ ವರ್ಷದ ಕಬಡ್ಡಿ ಪಂದ್ಯಾವಳಿಯಲ್ಲಿ ಅಂಕಣ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಶಿಕ್ಷಕ ಈ.ಆರ್.ನಾಯ್ಕ್ ಭಾಶಿ ಮಾತನಾಡಿ, ಸ್ನೇಹ ಪ್ರೀತಿ ಎನ್ನುವುದು ಬಹು ಮಹತ್ವವನ್ನು ಹೊಂದಿದೆ. ಎಲ್ಲಿಯವರೆಗೆ ಸ್ನೇಹ ಪ್ರೀತಿ ಗಟ್ಟಿಯಾಗಿರುತ್ತದೆ ಅಲ್ಲಿಯವರೆಗೆ ಬಾಂಧವ್ಯ ಉತ್ತಮವಾಗಿರುತ್ತದೆ. ನೀವು ಸಹ ಸಂಘಟನೆಯಲ್ಲಿ ಪರಸ್ಪರ ಬಾಂಧವ್ಯವನ್ನು ಬೆಳೆಸಿಕೊಂಡು ಸ್ನೇಹ ಪ್ರೀತಿಯಿಂದ ನಡೆದುಕೊಂಡು ಸಮಾಜವನ್ನ ಬದಲು ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು. ವಿಶ್ವಾಸದಿಂದ ಮಾಡಿದ ಗೆಳೆತನ ಶಾಶ್ವತ ವಾಗಿರುತ್ತದೆ ಎಂದರು.
ಸುಧಾಕರ್ ನಾಯ್ಕ ಮಾತನಾಡಿ, ಯುವಕರು ಹಿರಿಯರ ಮತ್ತು ಅನುಭವಸ್ಥರ ಮಾರ್ಗದರ್ಶನದಲ್ಲಿ ನಡೆಯಬೇಕು. ಹಿರಿಯರು ಸಹ ಯುವಕರ ಕೆಲಸಕಾರ್ಯಗಳಿಗೆ ಸಹಕಾರ ಬಲ ನೀಡಬೇಕು. ನಾವೆಲ್ಲ ಒಂದು ಎಂದು ಒಗ್ಗಟ್ಟಿನಿಂದ ಮುನ್ನಡೆದರೆ ಊರಿನ ಹಾಗೂ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.
ಅತಿಥಿಗಳಾದ ಕೆ.ಟಿ.ನಾಯ್ಕ ಹೆಗ್ಗೆರಿ, ಈ ಸಂಘಟನೆ ಯುವಕರು ಕ್ರೀಡೆ ಜೊತೆಗೆ ಕೆ.ಎಫ್.ಡಿ ಸಂದರ್ಭದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದು ತಾಲೂಕಿನಲ್ಲಿ ಇವರ ಕಾರ್ಯ ಮಾದರಿ ಹಾಗೂ ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ಎಲ್.ಜಿ.ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸದಾನಂದ ಹರಿಯಪ್ಪ ನಾಯ್ಕ್ ಹೆಗ್ಗೇರಿ ಅವರನ್ನು ಸನ್ಮಾನಿಸಲಾಯಿತು. ಸುನಿಲ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿವಾಕರ್ ಸಂಪಖಂಡ ಸ್ವಾಗತಿಸಿ ನಿರೂಪಿಸಿದರು. ಅರುಣ್ ಕುಮಾರ ವಂದಿಸಿದರು.ವೇದಿಕೆಯಲ್ಲಿ ಮಾಬ್ಲೆಶ್ವರ ನಾಯ್ಕ್ ಉಪಸ್ಥಿತರಿದ್ದರು.